ರಾಜಸ್ಥಾನ ವಿಧಾನಸಭೆಯ ಪ್ರತಿಪಕ್ಷ ನಾಯಕಿ ಸ್ಥಾನಕ್ಕೆ ವಸುಂಧರಾ ರಾಜೆ ಶುಕ್ರವಾರ ತಮ್ಮ ರಾಜೀನಾಮೆ ಪತ್ರವನ್ನು ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿಯವರಿಗೆ ಸಲ್ಲಿಸಿದ್ದಾರೆ.
ಒಳಗೊಳಗೆ ಅಸಮಾಧಾನದಿಂದ ಕುದಿಯುತ್ತಿದ್ದ ವಸುಂಧರಾ ರಾಜೆ ಅವರು ಬಿಜೆಪಿಯ ಪ್ರಮುಖ ನಾಯಕಿಯಾದ ಸುಷ್ಮಾ ಸ್ವರಾಜ್ ಅವರನ್ನು ಗುರುವಾರ ಭೇಟಿಯಾಗುವುದಾಗಿ ನಿರ್ಧರಿಸಲಾಗಿತ್ತು. ಆದರೆ ಆ ಭೇಟಿ ಸಾಧ್ಯವಾಗಿಲ್ಲವಾಗಿತ್ತು.
'ವಸುಂಧರಾ ರಾಜೆ ಅವರು ಅಕ್ಟೋಬರ್ 20ರಂದು ಭೇಟಿಯಾಗುವುದಾಗಿ ಹೇಳಿದ್ದರು. ಆದರೆ ಮುಂಬೈಯಲ್ಲಿ ತನಗೆ ತುರ್ತು ಕೆಲಸ ಇರುವುದರಿಂದ ತಾನು ಅ.21ಅಥವಾ 22ರಂದು ಭೇಟಿಯಾಗುವುದಾಗಿ ದೂರವಾಣಿ ಮೂಲಕ ತಿಳಿಸಿದ್ದರು. ಆದರೂ ಈವರೆಗೂ ರಾಜೆ ತನ್ನನ್ನು ಭೇಟಿಯೇ ಆಗಿಲ್ಲ' ಎಂದು ಸುಷ್ಮಾ ಪ್ರತಿಕ್ರಿಯೆ ನೀಡಿದ್ದಾರೆ.
ವಸುಂಧರಾ ರಾಜೀನಾಮೆ ವಿಷಯದ ಕುರಿತು ಬಿಜೆಪಿ ಸಂಸದೀಯ ಮಂಡಳಿ ಶುಕ್ರವಾರ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದ್ದು, ಈ ಸಂದರ್ಭದಲ್ಲಿ ಮೂರು ರಾಜ್ಯಗಳಲ್ಲಿ ಪಕ್ಷ ತೀವ್ರ ಮುಖಭಂಗ ಅನುಭವಿಸಿರುವ ಬಗ್ಗೆಯೂ ಸಮಾಲೋಚನೆ ನಡೆಸುವುದಾಗಿ ಹೇಳಿದೆ. ರಾಜಸ್ಥಾನದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋತಿರುವ ಹಿನ್ನೆಲೆಯಲ್ಲಿ ವಸುಂಧರಾ ರಾಜೆ ನೈತಿಕ ಹೊಣೆ ಹೊತ್ತು ವಿಪಕ್ಷ ನಾಯಕಿ ಹುದ್ದೆಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚಿಸಿತ್ತು.
ಆದರೆ ಪಕ್ಷದ ಸೂಚನೆಗೆ ಕ್ಯಾರೆ ಎನ್ನದ ವಸುಂಧರಾ ಸಾಕಷ್ಟು ತಕರಾರು ವ್ಯಕ್ತಪಡಿಸಿದ್ದರು. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ದೇಶಾದ್ಯಂತ ಬಿಜೆಪಿ ಹೀನಾಯ ಸೋಲು ಕಂಡಿರುವುದಕ್ಕೆ ಕಟು ಟೀಕೆ ವ್ಯಕ್ತಪಡಿಸಿದ್ದರು. ಅದಕ್ಕೆ ಯಾರನ್ನು ನೈತಿಕ ಹೊಣೆಗಾರರನ್ನಾಗಿ ಮಾಡುತ್ತೀರಿ ಎಂಬುದಾಗಿಯೂ ರಾಜೆ ಪ್ರಶ್ನಿಸಿದ್ದರು.