ಮಹಾರಾಷ್ಟ್ರ ಚುನಾವಣೆಯಲ್ಲಿ ಅಧಿಕಾರದ ಗದ್ದುಗೆ ಏರುವ ಕನಸು ನನಸಾಗದಿರುವುದಕ್ಕೆ 'ಹೊರಗಿನವರು'ಕಾರಣರಲ್ಲ ಎಂದು ಕಿಡಿಕಾರಿರುವ ಶಿವಸೇನಾ ವರಿಷ್ಠ ಬಾಳಾ ಸಾಹೇಬ್ ಠಾಕ್ರೆ, ಮರಾಠಿಗರೇ ತಮ್ಮ ಬೆನ್ನಿಗೆ ಚೂರಿ ಹಾಕುವ ಮೂಲಕ ಶಿವಸೇನೆಯನ್ನು ತಿರಸ್ಕರಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ-ಬಿಜೆಪಿ ಮೈತ್ರಿಕೂಟ ನಿರೀಕ್ಷಿತ ಮಟ್ಟದಲ್ಲಿ ಬಹುಮತ ಗಳಿಸದೆ ಅಧಿಕಾರದ ಗದ್ದುಗೆ ಏರುವಲ್ಲಿ ವಿಫಲವಾಗಿರುವ ಹಿನ್ನೆಲೆಯಲ್ಲಿ 84ರ ಹರೆಯದ ಠಾಕ್ರೆ, ತಮ್ಮ ಪಕ್ಷದ ಮುಖವಾಣಿಯಾಗಿರುವ ಸಾಮ್ನಾದ ಸಂಪಾದಕೀಯದಲ್ಲಿ ಮರಾಠಿಗರ ವಿರುದ್ಧವೇ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಗೆಲುವಿಗೆ ಎಂಎನ್‌ಎಸ್ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು,ದುಷ್ಟ ಶಕ್ತಿಯೊಂದು ತಮ್ಮನ್ನು ಮತ್ತು ಮರಾಠಿ ಜನತೆಯನ್ನು ಬೇರ್ಪಡಿಸುವ ಷಡ್ಯಂತ್ರ ನಡೆಸಿರುವುದಾಗಿ ಸಂಪಾದಕೀಯದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆ ನಿಟ್ಟಿನಲ್ಲಿ ಮರಾಠಿಗರೇ ಬೆನ್ನಿಗೆ ಚೂರಿ ಹಾಕುವ ಮೂಲಕ ಶಿವಸೇನೆಯನ್ನು ಸೋಲಿಸಿದ್ದಾರೆ ಎಂದು ಠಾಕ್ರೆ ತಿಳಿಸಿದ್ದು, ನಾನು ನಿಜಕ್ಕೂ ಈಗ ಯಾವುದೇ ವಿಶ್ವಾಸ ಹೊಂದಿಲ್ಲ. ಈ ಫಲಿತಾಂಶದಿಂದಾಗಿ ತಾನು ದೇವರ ಮತ್ತು ಮರಾಠಿಗರ ಮೇಲಿನ ನಂಬಿಕೆ ಕಳೆದುಕೊಳ್ಳುವಂತಾಗಿದೆ ಎಂದು ನಿರಾಸೆ ವ್ಯಕ್ತಪಡಿಸಿದ್ದಾರೆ. ಶಿವಸೇನೆ ಸೋಲಿಗೆ ಮರಾಠಿಗರೇ ಕಾರಣ ಎಂಬ ಹೇಳಿಕೆ ನೀಡಲು ನಿಜಕ್ಕೂ ತುಂಬಾ ವೇದನೆಯಾಗುತ್ತಿದೆ. ಆದರೆ ಸತ್ಯವನ್ನು ಮುಚ್ಚಿಡಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದರು.