ದಲಿತರ ಏಳಿಗೆಗೆ ಕಂಕಣಬದ್ಧವೆಂದು ಹೇಳಿಕೊಳ್ಳುವ, ಉತ್ತರಪ್ರದೇಶವನ್ನು ಆಳುವ ಬಹುಜನ ಸಮಾಜ ಪಕ್ಷದ ಶಾಸಕರೊಬ್ಬರು ತಮ್ಮ 20 ಮಂದಿ ಬೆಂಬಲಿಗರೊಂದಿಗೆ ದಲಿತರ ಮನೆಗೆ ನುಗ್ಗಿ ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಮನೆಯ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಸಂತ ಕಬೀರ್ ನಗರದಲ್ಲಿ ದಲಿತರ ಮನೆಗಳಲ್ಲಿ ಬೆಂಕಿಹಚ್ಚುವಿಕೆ ಮತ್ತು ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಶಾಸಕ ತಬೀಶ್ ಖಾನ್ ವಿರುದ್ಧ ಕೇಸು ದಾಖಲಿಸಲಾಗಿದೆ. ಸಂತಕಬೀರ್ ನಗರದ ರಾಜೇದಿಹಾ ಗ್ರಾಮದಲ್ಲಿ ಭೂವಿವಾದಕ್ಕೆ ಸಂಬಂಧಪಟ್ಟಂತೆ ತಾಬಿಶ್ ಖಾನ್ ಮತ್ತು ಅವರು ಬೆಂಬಲಿಗರು ದಲಿತ ಕುಟುಂಬದವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಲ್ಲದೇ ಮನೆಯ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದ್ದರು.
ಬಂದೂಕುಗಳು ಮತ್ತು ದೊಣ್ಣೆಗಳನ್ನು ಹಿಡಿದಿದ್ದ ಖಾನ್ ಮತ್ತು ಅವರ ಬೆಂಬಲಿಗರು ತಮ್ಮ ಮನೆಗೆ ನುಗ್ಗಿ ತಮ್ಮ ಮೇಲೆ ಮತ್ತು ಕುಟುಂಬದವರ ಮೇಲೆ ಹಲ್ಲೆ ನಡೆಸಿದರೆಂದು ರಾಜೇದಿಹಾ ಗ್ರಾಮದ ನಿವಾಸಿಯಾದ ಹರಿರಾಂ ಆರೋಪಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಎಸ್‌ಸಿ/ಎಸ್‌ಟಿ ಕಾಯ್ದೆಯಡಿಯಲ್ಲಿ ಖಾನ್ ವಿರುದ್ಧ ಕೇಸು ದಾಖಲಿಸಲಾಗಿದ್ದು, ಖಾನ್ ತನ್ನ ಬೆಂಬಲಿಗರ ಜತೆ ನಾಪತ್ತೆಯಾಗಿದ್ದಾನೆ. ಖಾನ್ ಮತ್ತು ಅವರ ಬೆಂಬಲಿಗರ ಬಂಧನಕ್ಕೆ ಶೋಧನೆ ನಡೆಸಲಾಗುತ್ತಿದೆಯೆಂದು ಪೊಲೀಸರು ಹೇಳಿದ್ದಾರೆ.