ಗೋವಾದಲ್ಲಿ ಬಾಂಬ್ ಸ್ಫೋಟ ಪ್ರಕರಣಗಳ ಆರೋಪ ಎದುರಿಸುತ್ತಿರುವ ಸನಾತನ್ ಸಂಸ್ಥದ ವಿಚಾರಗಳನ್ನು ಪೊಲೀಸರು ಪ್ರಶ್ನಿಸಿದ್ದಾರೆ.
ಆಧ್ಯಾತ್ಮಿಕ ಮೌಲ್ಯಗಳ ಪಠಣ ಮಾಡಿಕೊಂಡು ಬಾಂಬ್ ಸ್ಫೋಟಗಳಂಥ ಕೃತ್ಯಗಳಿಗೆ ಕೈಹಾಕುತ್ತಿರುವ ಸನಾತನ್ ಸಂಸ್ಥಾ ಸಂಘಟನೆಯ ಸಿದ್ದಾಂತಲ್ಲೇ ಏನೋ ತಪ್ಪಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಇಲ್ಲಿಯ ಸ್ಥಳೀಯ ಸುದ್ದಿ ವಾಹಿನಿಯೊಂದರೊಂದಿಗೆ ಮಾತನಾಡುತ್ತಿದ್ದ ಗೋವಾ ಡಿಐಜಿ ಆರ್.ಎಸ್.ಯಾದವ್, ಸನಾತನ್ ಸಂಸ್ಥಾ ಸಂಘಟನೆಯು ಪ್ರಜಾತಾಂತ್ರಿಕ ವ್ಯವಸ್ಥೆ ಅಡಿಯಲ್ಲಿ ತಮ್ಮ ಸಿದ್ದಾಂತವನ್ನು ರೂಪಿಸಬೇಕೆಂದು ಸಲಹೆ ನೀಡಿದ್ದಾರೆ.
ಈ ಹಿಂದೂ ಸಂಘಟನೆಯ ಸಿದ್ಧಾಂತಲ್ಲೇ ಏನೋ ದೋಷ ಇದೆ. ಒಂದು ಕಡೆ ಸನಾತನ್ ಸಂಸ್ಥಾದವರು ಆಧ್ಯಾತ್ಮದ ಬಗ್ಗೆ ಮಾತನಾಡುತ್ತಾರೆ. ದೇವರು ಮತ್ತು ಸಂತೃಪ್ತತೆಯ ಬಗ್ಗೆಯೂ ಹೇಳುತ್ತಾರೆ. ಆದರೆ, ಅದರ ಕಾರ್ಯಕರ್ತರು ಭಯೋತ್ಪಾದನಾ ಕೃತ್ಯಗಳಲ್ಲಿ ಶಾಮೀಲಾಗುವುದಾದರೂ ಹೇಗೆ ಎಂದು ಯಾದವ್ ಪ್ರಶ್ನಿಸಿದ್ದಾರೆ.
ಕೆಲ ದಿನಗಳ ಹಿಂದೆ, ಸನಾತನ್ ಸಂಸ್ಥಾ ಸಂಘಟನೆಗೆ ಸೇರಿದವರೆನ್ನಲಾದ ಇಬ್ಬರು ಕಾರ್ಯಕರ್ತರು ಗೋವಾದ ಜನಸಂದಣಿ ಪ್ರದೇಶಗಳಲ್ಲಿ ಬಾಂಬ್‌ಗಳನ್ನು ಸಾಗಿಸುವಾಗ ಸ್ಫೋಟಗೊಂಡು ಮೃತಪಟ್ಟಿದ್ದರು. ಆಗ ಈ ಹಿಂದೂ ಸಂಘಟನೆಯ ನಿಜರೂಪ ಬೆಳಕಿಗೆ ಬಂದಿತ್ತು.