ಅರುಣಾಚಲ ವಿಧಾನಸಭಾ ಚುನಾವಣೆಯಲ್ಲಿ ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ ಕಾಂಗ್ರೆಸ್ ಪಕ್ಷದ 5ನೇ ಮುಖ್ಯಮಂತ್ರಿಯಾಗಿ ಡೋರ್ಜಿ ಖಾಂಡೂ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು.
54ರ ಹರೆಯದ ಖಾಂಡೂಗೆ ರಾಜ್ಯಪಾಲ ಜೆಜೆ ಸಿಂಗ್ ಅವರು ರಾಜಭವನದ ದರ್ಬಾರ್ ಹಾಲ್‌ನಲ್ಲಿ ಪ್ರತಿಜ್ಞಾವಿಧಿ ಬೋಧಿಸಿದರು. ಖಾಂಡೂ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೆ ಏರಿದಂತಾಗಿದೆ.
ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನೂತನವಾಗಿ ಆಯ್ಕೆಯಾದ ಎಲ್ಲಾ ಶಾಸಕರೂ ಹಾಜರಿದ್ದರು. ಮಾಜಿ ಮುಖ್ಯಮಂತ್ರಿ ಗೆಗಾಂಗ್ ಅಪಾಂಗ್, ವೆಮ್ ಖಾಂಡೂ, ಎಐಸಿಸಿ ವೀಕ್ಷಕ ವಿ.ನಾರಾಯಣಸ್ವಾಮಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಲ್ಯುಜಿನೋ ಪಾಲೇರಿಯೋ, ಎಐಸಿಸಿ ಕಾರ್ಯದರ್ಶಿ ಸಂಜಯ್ ಬಾಪಾನ್ ಭಾಗವಹಿಸಿದ್ದರು.
ಮಿಲಿಟರಿಯ ಮಾಜಿ ಗುಪ್ತಚರ ಇಲಾಖೆಯ ಅಧಿಕಾರಿಯಾಗಿದ್ದ ಖಾಂಡೂ ಅವರು 1980ರಲ್ಲಿ ಸಕ್ರಿಯವಾಗಿ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. 1990ರಲ್ಲಿ ಅರುಣಾಚಲ ಪ್ರದೇಶದ ಮುಖ್‌ಟೋ ಕ್ಷೇತ್ರದಿಂದ ವಿಧಾನಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದರು. 1995ರಲ್ಲಿಯೂ ಅದೇ ಕ್ಷೇತ್ರದಿಂದ ಪುನರಾಯ್ಕೆಗೊಂಡಿದ್ದ ಅವರು ಸಚಿವರಾಗಿ ಕಾರ್ಯನಿರ್ವಹಿಸಿದ್ದರು.