ಪೂಂಚ್ ಜಿಲ್ಲೆಯ ಮೆಂಧಾರ್ ವಲಯದ ಭಾರತೀಯ ಚೌಕಿ ಮೇಲೆ ಪಾಕಿಸ್ತಾನದ ಪಡೆಗಳು ಶನಿವಾರ ಗುಂಡಿನ ದಾಳಿ ನಡೆಸಿದ್ದರಿಂದ ಸೇನೆಯ ಯೋಧನೊಬ್ಬ ಗಾಯಗೊಂಡಿದ್ದು, ಪಾಕಿಸ್ತಾನ ಸೇನೆಯು ಮತ್ತೆ ಕದನವಿರಾಮ ಉಲ್ಲಂಘಿಸಿ ಕಮಂಗಿತನ ತೋರಿಸಿದೆ.
ಎಲ್‌ಎಂಜಿಗಳು ಮತ್ತು ಎಂಎಂಜಿಗಳನ್ನು ಬಳಸಿಕೊಂಡು ಪಾಕಿಸ್ತಾನ ಪಡೆಗಳು ಮೆಂದಾರ್ ವಲಯದ ಕ್ರಿಪಾನ್ ಪೋಸ್ಟ್ ಮೇಲೆ ಬೆಳಿಗ್ಗೆ 9.30ರಿಂದ 10.30ರವರೆಗೆ ಗುಂಡಿನ ದಾಳಿ ನಡೆಸಿತೆಂದು ರಕ್ಷಣಾ ಮೂಲಗಳು ಹೇಳಿದ್ದು, ಪಾಕ್ ಪಡೆಗಳು ಸುಮಾರು 500 ಸುತ್ತು ಗುಂಡು ಹಾರಿಸಿದರೆಂದು ಹೇಳಿವೆ.ಪಾಕ್ ಪಡೆಗಳ ಗುಂಡಿನ ದಾಳಿಗೆ ಭಾರತದ ಪಡೆಗಳು ಪ್ರತಿದಾಳಿ ಮಾಡಲಿಲ್ಲವೆಂದು ತಿಳಿದುಬಂದಿದ್ದು, 10.30ರ ಬಳಿಕ ಗುಂಡುಹಾರಾಟ ನಿಂತಿತೆಂದು ವರದಿಯಾಗಿತ್ತು.
ಆದರೆ ಪಾಕ್ ರೇಂಜರ್‌ಗಳು ಗುಂಡಿನ ದಾಳಿ ಪುನಾರಂಭ ಮಾಡಿದ್ದು, ಓಮ್ ಬಹಾದುರ್ ಎಂಬ ಯೋಧ ಗುಂಡಿನ ಗಾಯಗಳಿಗೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ಅವರು ಹೇಳಿದ್ದಾರೆ.ಪಾಕಿಸ್ತಾನ ಪಡೆಗಳು ಆಗಾಗ್ಗೆ ಗುಂಡಿನ ದಾಳಿ ನಡೆಸುವ ಮೂಲಕ ಕದನವಿರಾಮ ಉಲ್ಲಂಘಿಸುತ್ತಿದೆ. ಕಳೆದ ಸೆ.21ರಂದು ಪಾಕಿಸ್ತಾನ ಪಡೆಗಳು ಭಾರತದ ನೆಲೆಗಳ ಮೇಲೆ 135 ಸುತ್ತು ಗುಂಡು ಹಾರಿಸಿದ್ದವು.