ಕ್ರೈಸ್ತ ಧರ್ಮಕ್ಕೆ ಮತಾಂತರ ಗೊಂಡಿದ್ದ ಆರು ಸಾವಿರ ಮಂದಿ, ಮರಳಿ ಮಾತ್ರ ಧರ್ಮಕ್ಕೆ ಪರಿವರ್ತನೆ ಹೊಂದುವ ಕಾರ್ಯ ಥಾಣೆಯಲ್ಲಿ ನಡೆಯಲಿದೆ ಎಂಬುದಾಗಿ ಸ್ವಾಮಿ ನರೇಂದ್ರ ಮಹಾರಾಜ್ ಸಮೂಹದ ವಕ್ತಾರರು ತಿಳಿಸಿದ್ದಾರೆ. ಇದರಿಂದಾಗಿ ಒಂದು ಲಕ್ಷ ಮಂದಿಯನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುವ ಗುರಿ ಈಡೇರಿದಂತಾಗಿದೆ ಎಂದು ಅವರು ತಿಳಿಸಿದ್ದಾರೆ.
ಕ್ರೈಸ್ತ ಧರ್ಮಕ್ಕೆ ಒತ್ತಾಯಪೂರ್ವಕವಾಗಿ ಮತಾಂತರಗೊಂಡು ಕಷ್ಟ ಅನುಭವಿಸುತ್ತಿದ್ದ ಮಂದಿಯನ್ನು ಗುರುತಿಸಲು ವಿವಿಧ ಸಂಸ್ಥೆಗಳು ಸಹಕರಿಸಿದ್ದವು ಎಂದು ಅವರು ಹೇಳಿದ್ದಾರೆ. ಇಂತಹ ಸಮಸ್ಯೆಯಲ್ಲಿ ತೊಳಲಾಡುತ್ತಿದ್ದ ಸುಮಾರು 94,000 ಮಂದಿಯನ್ನು ಇದುವರೆಗೆ ಪರಿವರ್ತನೆ ಮಾಡಿದ್ದು, ಕಳೆದೆರಡು ವರ್ಷಗಳಲ್ಲಿ ಒಂದು ಲಕ್ಷ ಮಂದಿಯನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುವ ಗುರಿ ಹಮ್ಮಿಕೊಳ್ಳಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಮತಾಂತರದ ಆಮಿಷಕ್ಕಾಗಿ ತೋರಿಸಲಾಗಿದ್ದ ಬಣ್ಣಬಣ್ಣದ ಚಿತ್ರಗಳಿಗೆ ಮನಸೋತು ಪರಿವರ್ತನೆ ಹೊಂದಿದ್ದ ಇವರಿಗೆ ಇದೆಲ್ಲವೂ ಬರೀ ಬೊಗಳೆ ಎಂಬ ವಿಚಾರ ಅರಿವಾಗಿದ್ದು ಅವರು ತಮ್ಮ ಮಾತೃ ಧರ್ಮಕ್ಕೆ ಯಾವುದೇ ಒತ್ತಡ ಅಥವಾ ಭರವಸೆ ಇಲ್ಲದೆ ತಮ್ಮ ಸ್ವಂತ ಇಚ್ಚೆಯಿಂದ ಮರಳುತ್ತಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
ಈ ವಿಶೇಷ ಕಾರ್ಯಕ್ಕಾಗಿ ಸುಮಾರು ಅರ್ಧ ಡಜನ್‌ನಷ್ಟು ಪಂಡಿತರು ಅಯೋಧ್ಯೆಯಿಂದ ಥಾಣೆಗೆ ಆಗಮಿಸಿದ್ದಾರೆ. ಇದೀಗಾಗಲೇ ಪರಿವರ್ತನೆಗೊಂಡಿರುವ 94,000 ಮಂದಿಯಲ್ಲಿ ಮಹಾರಾಷ್ಟ್ರ, ಗುಜರಾತ್, ಗೋವಾ, ಕರ್ನಾಟಕ ಹಾಗೂ ಆಂಧ್ರಪ್ರದೇಶದವರು ಸೇರಿದ್ದಾರೆ.