ಅರ್ಥವಿಲ್ಲದ ಹಿಂಸಾಚಾರ ನಡೆಸುವ ಮಾವೋವಾದಿಗಳ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡಿರುವ ಕೇಂದ್ರ ಗೃಹಸಚಿವ ಪಿ.ಚಿದಂಬರಂ ಅವರು ಇಂತಹವರ ವಿರುದ್ಧ ಕಠಿಣ ನಿಲುವು ಹೊಂದಿದ್ದಾರೆ.
"ಎನ್ಎಂಡಿಸಿಗೆ ಭದ್ರತೆ ನೀಡುವ ಪೊಲೀಸ್ ಪಡೆಯ ಮೇಲೆ ದಾಳಿ ನಡೆಸಲು ಪ್ರೇರಣೆಯಾದರೂ ಏನು? ಮಾವೋವಾದಿ ಬಂಡುಕೋರರು ನೀಡಲುದ್ದೇಶಿಸಿರುವ ಸಂದೇಶವಾದರೂ ಏನು? ಈ ಪ್ರಶ್ನೆಗಳನ್ನು ಮಾವೋವಾದಿಗಳು ಮಾತ್ರವಲ್ಲ ಅವರ ಬೆಂಬಲಿಗರಿಗೂ ಕೇಳಲು ಸರ್ಕಾರ ಬಯಸುತ್ತಿದೆ" ಎಂಬುದಾಗಿ ತಮ್ಮ ಕಠಿಣ ಶಬ್ದಗಳ ಹೇಳಿಕೆಯಲ್ಲಿ ಚಿದಂಬರಂ ಪ್ರಶ್ನಿಸಿದ್ದಾರೆ.
"ಪ್ರಜಾಪ್ರಭುತ್ವ ಹಾಗೂ ಅಭಿವೃದ್ಧಿಯ ಮೇಲೆ ನಂಬುಗೆ ಇರಿಸಿರುವ ಎಲ್ಲಾ ಪ್ರಜೆಗಳು ನಕ್ಸಲರ ಹಿಂಸಾಚಾರವನ್ನು ಖಂಡಿಸಲು ಕಾಲ ಪಕ್ವವಾಗಿದೆ" ಎಂದು ಚಿದು ಹೇಳಿದ್ದಾರೆ.
ಛತ್ತೀಸ್‌ಗಢದಲ್ಲಿರುವ ಸಾರ್ವಜನಿಕ ವಲಯದ ಮಿನರಲ್ ಕಂಪೆನಿಯ ಮೇಲೆ ದಾಳಿ ನಡೆಸಿದ ನಕ್ಸಲರು ನಾಲ್ವರು ಸಿಐಎಸ್ಎಫ್ ಸಿಬ್ಬಂದಿಗಳನ್ನು ಕೊಂದು ಹಾಕಿರುವ ಮರುದಿನ ಸಚಿವರ ಹೇಳಿಕೆ ಹೊರಬಿದ್ದಿದೆ. ದಾಳಿಯಲ್ಲಿ ಇಬ್ಬರು ಪೇದೆಗಳು ಗಂಭೀರ ಗಾಯಗೊಂಡಿದ್ದಾರೆ. ಈ ದಾಳಿಯನ್ನು ನಕ್ಸಲರು ಛತ್ತಿಸ್‌ಗಢದ ಬಚೇಲಿಯಲ್ಲಿರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ(ಎನ್ಎಂಡಿಸಿ)ದ ಗಣಿಗಾರಿಕಾ ಪ್ರದೇಶದಲ್ಲಿ ನೆಲಬಾಂಬ್ ಸ್ಫೋಟಿಸಿ ನಡೆಸಿದ್ದಾರೆ.