ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರು ತಮ್ಮ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೇರುತ್ತಿದ್ದಾರೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ನಾಯಕ ಅಮರ್ ಸಿಂಗ್, ಮಾಯಾವತಿ ತನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಸುಳ್ಳು ಪ್ರಕರಣಗಳನ್ನು ಹೇರುವ ಮೂಲಕ ತಮ್ಮ ‘ಬಲಿಪಶು’ ಮಾಡುತ್ತಿದ್ದಾರೆ ಎಂದು ಸೋಮವಾರ ಇಲ್ಲಿ ಆಪಾದಿಸಿದ ಅಮರ್‌ಸಿಂಗ್, "ವಿವಿಧ ಕಂಪೆನಿಗಳಲ್ಲಿ ಇರುವ ಎಲ್ಲ ಷೇರುಗಳ ವಿವರ ಒದಗಿಸುವೆ. ಧೈರ್ಯವಿದ್ದರೆ ನನ್ನ ವಿರುದ್ಧ ಕ್ರಮ ಕೈಗೊಳ್ಳಿ" ಎಂದು ಮಾಯಾವತಿ ಅವರಿಗೆ ಸವಾಲು ಹಾಕಿದ್ದಾರೆ. ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
"ಮುಖೇಶ್ ಅಂಬಾನಿ ಅವರ ಕಂಪೆನಿ, ಇನ್‌ಫೋಸಿಸ್, ಎನ್‌ಟಿಪಿಸಿ ಅಥವಾ ಒಎನ್‌ಜಿಸಿ ಇರಲಿ ಯಾವುದೇ ಕಂಪೆನಿಯಲ್ಲಿನ ನನ್ನ ಪಾಲಿನ ಶೇರುಗಳ ವಿವರಗಳನ್ನು ಮಾಯಾವತಿ ಅವರಿಗೆ ಕಳುಹಿಸುವೆ. ಅವರು ನನ್ನ ವಿರುದ್ಧ ಕಾನ್ ಪುರದ ಬಾಬುಪುನ್ವಾ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಿ" ಎಂದು ಅವರು ಮುಖ್ಯಮಂತ್ರಿಗಳಿಗೆ ಸವಾಲೆಸೆದಿದ್ದಾರೆ.
ಸಿಂಗ್, ಅವರ ಪತ್ನಿ ಪಂಕಜ ಮತ್ತು ಚಿತ್ರನಟ ಅಮಿತಾಭ್ ಬಚ್ಚನ್ ಅವರ ವಿರುದ್ಧ ಕಳೆದವಾರ ಹಣ ದುರುಪಯೋಗದ ಆಪಾದನೆ ಹೊರಿಸಿ ಎಫ್‌ಐಆರ್ ದಾಖಲು ಮಾಡಲಾಗಿತ್ತು.