ರಾಜನಾಥ್ ಸಿಂಗ್ ಸಿಂಗ್ ಬಿಜೆಪಿ ರಾಷ್ಟ್ರಾಧ್ಯಕ್ಷ ಪದವಿಗೆ ರಾಜಿನಾಮೆ ಸಲ್ಲಿಸಿದ್ದು, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರಿಗೆ ಕೇಸರಿ ಪಾಳಯದ ಅಧಿಕಾರವನ್ನು ಸುಪ್ರೀಮ್ ಎಲ್.ಕೆ. ಅಡ್ವಾಣಿ ಹಸ್ತಾಂತರಿಸಿದ್ದಾರೆ.
ಸಾಮಾನ್ಯ ಕಾರ್ಯಕರ್ತನಾಗಿ ನಾನು ಪಕ್ಷಕ್ಕೆ ಸೇರ್ಪಡೆಗೊಂಡಿದ್ದವನು. ಈಗ ಬಿಜೆಪಿ ರಾಷ್ಟ್ರಾಧ್ಯಕ್ಷ ಸ್ಥಾನ ಪಡೆದಿರುವುದು ಸಂತೋಷ ತಂದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ ಮತ್ತು ರಾಜನಾಥ್ ಮಾರ್ಗದರ್ಶನದಲ್ಲಿ ಪಕ್ಷದ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಅಧಿಕಾರವಹಿಸಿಕೊಂಡ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಡ್ಕರಿ ತಿಳಿಸಿದ್ದಾರೆ.
PR
ಇಂದು ಅಪರಾಹ್ನ ನಡೆದ ಪಕ್ಷದ ಸಂಸದೀಯ ಸಮಿತಿಯ ಸಭೆಯಲ್ಲಿ ಗಡ್ಕರಿ ಆಯ್ಕೆಯನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಬಳಿಕ ಪತ್ರಿಕಾಗೋಷ್ಠಿಯಲ್ಲಿ ಆಯ್ಕೆಯನ್ನು ಅಧಿಕೃತವಾಗಿ ಬಿಜೆಪಿ ಮುಖಂಡರು ಪ್ರಕಟಿಸಿದರು.
ಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿಕೊಂಡು ಬಂದವನು ನಾನು. ಸಂಘ ಪರಿವಾರದೊಂದಿಗೆ ಬಾಲ್ಯದಿಂದಲೇ ನಂಟು ಹೊಂದಿದ್ದ ನಾನು ಪಕ್ಷ ಇದುವರೆಗೆ ವಹಿಸಿರುವ ಎಲ್ಲಾ ಕೆಲಸಗಳನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಿದ್ದೇನೆ. ನನಗೆ ತಿಳಿದಂತೆ ಯಾವುದೇ ಲೋಪ ಎಸಗಿಲ್ಲ. ಅಧ್ಯಕ್ಷನಾಗಿರುವ ನಾನು ಮುಂದೆಯೂ ಅದನ್ನೇ ಮುಂದುವರಿಸಲು ಬಯಸುತ್ತೇನೆ ಎಂದರು.
ಅಲ್ಲದೆ ತನಗೆ ಪಕ್ಷದ ಹಿರಿಯರ ಮಾರ್ಗದರ್ಶನ, ಆಶೀರ್ವಾದದ ಅಗತ್ಯವಿದೆ. ಪಕ್ಷದ ಯಾರನ್ನು ಕೂಡ ನಿರ್ಲಕ್ಷಿಸದೆ, ಸಮಸ್ಯೆಗಳಿದ್ದಲ್ಲಿ ಪರಿಹರಿಸಲು ಶತಯತ್ನ ನಡೆಸುತ್ತೇನೆ ಎಂದು ಇದೇ ಸಂದರ್ಭದಲ್ಲಿ ಅವರು ಭರವಸೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಅಡ್ವಾಣಿ, ರಾಜನಾಥ್, ಲೋಕಸಭಾ ವಿರೋಧಪಕ್ಷದ ನಾಯಕಿ ಸುಷ್ಮಾ ಸ್ವರಾಜ್, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.
ಅಧಿಕಾರ ವಹಿಸಿಕೊಂಡ ಬಳಿಕ ಗಡ್ಕರಿಯವರು ಅಡ್ವಾಣಿ, ರಾಜನಾಥ್, ಸುಷ್ಮಾ ಸೇರಿದಂತೆ ಹಿರಿಯರ ಕಾಲು ಮುಟ್ಟಿ ಆಶೀರ್ವಾದ ಪಡೆದುಕೊಂಡರು.
ಗಡ್ಕರಿ ಬಗ್ಗೆ ಒಂದಿಷ್ಟು... ನಿತಿನ್ ಗಡ್ಕರಿ ಹುಟ್ಟಿದ್ದು 1957ರ ಮೇ 27ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ. ಎಂ.ಕಾಮ್., ಎಲ್.ಎಲ್.ಬಿ., ಡಿ.ಬಿ.ಎಂ. ವಿದ್ಯಾಭ್ಯಾಸ ಮಾಡಿರುವ ಗಡ್ಕರಿ ಉದ್ಯಮಿ, ಕೃಷಿಕ ಹಾಗೂ ರಾಜಕಾರಣಿ.
ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಎಬಿವಿಪಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದವರು. 1995ರಿಂದ 1999ರವರೆಗೆ ಮಹಾರಾಷ್ಟ್ರ ಸರಕಾರದಲ್ಲಿ ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅನುಭವವೂ ಅವರಿಗಿದೆ.
ಪ್ರಸಕ್ತ ವಿಧಾನ ಪರಿಷತ್ ಸದಸ್ಯರಾಗಿರುವ ಗಡ್ಕರಿ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ, ಕೇಂದ್ರ ಲೋಕೋಪಯೋಗಿ ಇಲಾಖೆಯ ವಿಮರ್ಶಾ ಸಮಿತಿ ಅಧ್ಯಕ್ಷ ಹೀಗೆ ಹಲವಾರು ಜವಾಬ್ದಾರಿಯುತ ಸ್ಥಾನಗಳಲ್ಲಿ ಸಮರ್ಥ ನಾಯಕತ್ವ ಮೆರೆದವರು.
1980ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಭಾರತೀಯ ಜನತಾ ಪಕ್ಷದಲ್ಲಿ ಇದುವರೆಗೆ ಬಿಜೆಪಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರಿವರು..