ಭಾರತಕ್ಕೆ ಬರಬೇಕು ಎಂದು ಆಸೆಯಿದೆ, ಆದರೆ ನನ್ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿರುವುದರಿಂದ ಸದ್ಯದ ಮಟ್ಟಿಗೆ ದೇಶಕ್ಕೆ ವಾಪಸಾಗಲಾರೆ ಎಂದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿ ವಿದೇಶದಲ್ಲಿ ನೆಲೆಸಿರುವ ಶ್ರೇಷ್ಠ ಕಲಾವಿದ ಎಂ.ಎಫ್. ಹುಸೇನ್ ಹೇಳಿದ್ದಾರೆ.
ನನಗೆ ಭಾರತದ ನೆನಪುಗಳು ಕಾಡುತ್ತಿವೆ. ಆದರೆ ಅಲ್ಲಿಗೆ ವಾಪಸ್ ಹೋಗಲಾರೆ. ಯಾಕೆಂದರೆ ನನ್ನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ ಎಂದು 'ದುಬೈ ಮಾಡರ್ನ್ ಹೈಸ್ಕೂಲ್'ನಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಹುಸೇನ್ ತಿಳಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ತನ್ನ ಕಲಾಕೃತಿಯಲ್ಲಿ ಹಿಂದೂ ದೇವತೆಯ ಚಿತ್ರವೊಂದನ್ನು ಅವಮಾನಕಾರಿಯಾಗಿ ಚಿತ್ರಿಸಿದ ಆರೋಪ ಹೊತ್ತಿರುವ ಹುಸೇನ್ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು, ಇದೇ ಕಾರಣದಿಂದ ಅವರು ಭಾರತದಿಂದ ಹೊರಗುಳಿದಿದ್ದಾರೆ.
'ಭಾರತ ಮಾತೆ' ಎಂಬ ತನ್ನ ಕಲಾಕೃತಿಯಿಂದ ಹಿಂದೂ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜನಜಾಗೃತಿ ಸಮಿತಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಬೆತ್ತಲೆ ಮಹಿಳೆಯ ಚಿತ್ರವನ್ನು ಭಾರತದ ನಕ್ಷೆಯ ನಡುವೆ ಬಿಡಿಸಿದ್ದ ಈ ಕಲಾಕೃತಿ ಭಾರೀ ವಿವಾದ ಸೃಷ್ಟಿಸಿತ್ತು. ಅಲ್ಲದೆ ಇತರ ಹಲವು ಹಿಂದೂ ದೇವತೆಗಳ ಚಿತ್ರಗಳನ್ನೂ ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಆರೋಪಗಳು ಅವರ ಮೇಲಿವೆ.
ಇಂತಹ ವಿಲಕ್ಷಣತೆಗಳು ಅವರ ವಿರುದ್ಧವಿದ್ದರೂ ಈ ದಿಟ್ಟ ಕಲಾವಿದನ ಕುಂಚವನ್ನು ತಡೆಯಲು ಯಾರಿಂದಲೂ ಸಾಧ್ಯವಾಗಿಲ್ಲ. 'ಈಗಲೂ ನಾನು ಸಾಕಷ್ಟು ಕಲಾಕೃತಿಗಳನ್ನು ರಚಿಸುತ್ತಿದ್ದೇನೆ. ಭಾರತೀಯ ನಾಗರಿಕತೆಯ ಕುರಿತಾಗಿನ ನನ್ನ ಕಾರ್ಯಗಳಿಗೆ ಯಾವುದೇ ತಡೆಯುಂಟಾಗಿಲ್ಲ ಮತ್ತು ಅದರಲ್ಲೇ ನಾನು ವ್ಯಸ್ತನಾಗಿದ್ದೇನೆ' ಎಂದು ಈ 94ರ ಕಲಾವಿದ ಹೇಳುತ್ತಾರೆ.
ಆದರೆ ಅವರ ಆರೋಗ್ಯ ದಿನೇ ದಿನೇ ಕುಸಿಯುತ್ತಿದೆ, ಇದರ ಬಗ್ಗೆ ನಮಗೆ ಚಿಂತೆಯುಂಟಾಗಿದೆ ಎಂದು ಅವರ ಮೊಮ್ಮಗ ಹೇಳುತ್ತಾರೆ. ಭಾರತಕ್ಕೆ ಮರಳುವ ಆಸೆಯಿದ್ದರೂ ಸಾಧ್ಯವಾಗುತ್ತಿಲ್ಲ. ಹಿಂದಿನಂತೆ ನಿಖರವಾಗಿ ಅವರಿಗೀಗ ಚಿತ್ರ ಬಿಡಿಸಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರವರು.