ಬಹುಜನ ಸಮಾಜ ಪಾರ್ಟಿಯ ಮಂದಿ ತಮ್ಮ ಅಧಿನಾಯಕಿ ಮಾಯಾವತಿ ಅವರ ಹುಟ್ಟುಹಬ್ಬದ ಅಂಗವಾಗಿ ಏನೇನು ಕೊಡಲೂ ಸಿದ್ಧವಾಗಿರುತ್ತಾರೆ. ಇದೀಗ ಚಂದ್ರನ ಮೇಲಿನ ಭೂಮಿಯನ್ನೇ ಪಕ್ಷದ ಪ್ರಮುಖರೊಬ್ಬರು ಮಾಯಾವತಿ ಅವರಿಗೆ ಗಿಫ್ಟ್ ಆಗಿ ನೀಡಿದ್ದಾರೆ!
ಹೌದು. ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರ 54ನೇ ಹುಟ್ಟುಹಬ್ಬದ ಅಂಗವಾಗಿ ಕಾನ್ಪುರದ ಬಿಎಸ್‌ಪಿ ಮುಖಂಡ ಮಹೇಂದ್ರ ಸಿಂಗ್ ಸೆಂಗಾರ್ ಚಂದ್ರನ ಮೇಲಿನ ಮೂರು ಎಕರೆ ಜಮೀನನ್ನು ಗಿಫ್ಟ್ ಆಗಿ ತಮ್ಮ ನಾಯಕಿ ಮಾಯಾವತಿಗೆ ನೀಡಿದ್ದಾರೆ.
ಅಮೆರಿಕ ಮೂಲದ ಲೂನಾರ್ ರಿಪಬ್ಲಿಕ್ ಸೊಸೈಟಿ ಮೂಲಕ ಚಂದ್ರ ಮೇಲಿನ ಮೂರು ಎಕರೆ ಜಮೀನು ಖರೀದಿಸಿದ್ದಾರೆ. ಈ ಸೊಸೈಟಿ ಮುಕ್ತವಾಗಿ ಚಂದ್ರ ಮೇಲಿನ ಜಮೀನನ್ನು ಮಾರಾಟ ಮಾಡುತ್ತಿದ್ದು, ನೋಂದಣಿ ಪತ್ರವನ್ನೂ ನೀಡುತ್ತದೆ. ನೋಂದಣಿ ಪತ್ರದಲ್ಲಿ ಲೂನಾರ್ ರಿಪಬ್ಲಿಕ್ ಸೊಸೈಟಿಯ ಸದಸ್ಯ ಕಾರ್ಯದರ್ಶಿ ಮಾರ್ಗರೆಟ್ ಹೇಯಸ್ ಬಾರ್ಟನ್ ಅವರ ಸಹಿಯೂ ಇರುತ್ತದೆ ಎಂದು ಗಿಫ್ಟ್ ನೀಡಿದ ಬಳಿಕ ಮಹೇಂದ್ರ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
ಈ ನೋಂದಣಿ ಪತ್ರದಲ್ಲಿ ಜಮೀನಿನ ಬೆಲೆಯನ್ನು ನಮೂದಿಸಲಾಗಿರುವುದಿಲ್ಲ. ಹಾಗಾಗಿ ಜಮೀನಿನ ಬೆಲೆಯೆಷ್ಟು ಎಂದಿದ್ದಕ್ಕೆ ಅವರು, ಜಮೀನು ಎಷ್ಟು ಬೆಲೆಯೆಂಬುದು ಅಗತ್ಯವಲ್ಲ. ಎಂತಹ ಗಿಫ್ಟನ್ನು ನಾವು ನಮ್ಮ ನಾಯಕರಿಗೆ ನೀಡುತ್ತೇವೆಂಬುದು ಮುಖ್ಯ. ಹಾಗಾಗಿ ಇಲ್ಲಿ ಬೆಲೆ ಗೌಣ. ಪ್ರೀತಿ ಮುಖ್ಯ ಎಂದರು.