ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಂದಿದ ಸಿಪಿಎಂ ಜ್ಯೋತಿ: ಬಸು ಇನ್ನಿಲ್ಲ (Jyoti Basu Died | Bengal | Pneumonia infection | CPM | WB CM |Communist)
Bookmark and Share Feedback Print
 
ND
ನ್ಯೂಮೋನಿಯಾ ಸೋಂಕಿಗೊಳಗಾಗಿ ಕೃತಕ ಉಸಿರಾಟ ವ್ಯವಸ್ಥೆಯಲ್ಲಿದ್ದ ಹಿರಿಯ ಕಮ್ಯೂನಿಸ್ಟ್ ಮುಖಂಡ, ಪಶ್ಚಿಮ ಬಂಗಾಲದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐಎಂ ಸಂಸ್ಥಾಪಕರಲ್ಲೊಬ್ಬರಾದ ಜ್ಯೋತಿ ಬಸು(96ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮಧ್ಯಾಹ್ನ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಇಹಲೋಕ ತ್ಯಜಿಸಿದ್ದಾರೆ.

96ರ ಹರೆಯದ ಜ್ಯೋತಿರೀಂದ್ರ ಬಸು (1914-2010) ಅಸುನೀಗುವುದರೊಂದಿಗೆ ಭಾರತೀಯ ಕಮ್ಯೂನಿಸ್ಟ್ ಪಕ್ಷದ ಪ್ರಮುಖ ಅಧ್ಯಾಯವೊಂದು ಕೊನೆಗೊಂಡಂತಾಗಿದೆ. ಅವರ ನಿಧನಕ್ಕೆ ಪಕ್ಷ ಹಾಗೂ ಇತರ ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.

ನ್ಯೂಮೋನಿಯಾ, ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಹಿರಿಯ ಮಾರ್ಕಿಸ್ಟ್ ಜ್ಯೋತಿ ಬಸು ಅವರನ್ನು ಜನವರಿ 1ರಂದು ಗಂಭೀರ ಸ್ಥಿತಿಯಲ್ಲಿ ಕೋಲ್ಕತಾದ ಎಎಂಆರ್ಐ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಕೆಲವು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿಯೇ ಇತ್ತು. ಅಲ್ಲದೇ ಕೃತಕ ಉಸಿರಾಟ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಅದಕ್ಕೂ ಸ್ಪಂದಿಸದ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ ಎಂದು ಸಿಪಿಐಎಂನ ಹಿರಿಯ ಮುಖಂಡ ಬಿಮನ್ ಬೋಸ್ ಅಧಿಕೃತವಾಗಿ ಘೋಷಿಸಿದ್ದಾರೆ.

ಗಣ್ಯರ ಸಂತಾಪ: ಹಿರಿಯ ಮಾರ್ಕಿಸ್ಟ್ ಮುಖಂಡ, ಪಶ್ಚಿಮ ಬಂಗಾಳವನ್ನು ಸುದೀರ್ಘ(23ವ)ಕಾಲಾವಧಿಯ ಆಳಿದ ಮಾಜಿ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜ್ಯೋತಿ ಬಸು ಅವರ ನಿಧನ ರಾಜಕೀಯ ವಲಯಕ್ಕೆ ತುಂಬಲಾರದ ನಷ್ಟ ಎಂದು ಬಣ್ಣಿಸಿರುವ ಸಿಪಿಐಎಂನ ಹಿರಿಯ ಮುಖಂಡ ಗುರುದಾಸ್ ದಾಸ್‌ಗುಪ್ತಾ, ಪ್ರಕಾಶ್ ಕಾರಟ್, ಕೇಂದ್ರ ಗೃಹ ಸಚಿವ ಪಿ.ಚಿದಂಬರಂ, ಪ್ರಧಾನಿ ಡಾ.ಮನಮೋಹನ್ ಸಿಂಗ್, ಯುಪಿಎ ವರಿಷ್ಠೆ ಸೋನಿಯಾ ಗಾಂಧಿ, ಬಿಜೆಪಿ ಮುಖಂಡ ಲಾಲ್ ಕೃಷ್ಣಾ ಅಡ್ವಾಣಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬಸು ನಡೆದು ಬಂದ ದಾರಿ...
1914ರ ಜುಲೈ 8ರಂದು ಕೊಲ್ಕತ್ತಾದ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ ಜನಿಸಿದ್ದ ಹುಟ್ಟಿದ್ದ ಬಸು ಬ್ರಿಟನ್‌ನಲ್ಲಿ ಉನ್ನತ ವ್ಯಾಸಂಗ ಮಾಡಿದ್ದರು. ಮೊತ್ತ ಮೊದಲು ಅವರು ಮುಖ್ಯಮಂತ್ರಿ ಪಟ್ಟವನ್ನೇರಿದ್ದು 1977ರ ಜೂನ್ ತಿಂಗಳಲ್ಲಿ.

ಆ ನಂತರ 2000 ಇಸವಿಯವರೆಗೂ ಪಶ್ಚಿಮ ಬಂಗಾಲ ಮುಖ್ಯಮಂತ್ರಿಯಾಗಿ ಮುಂದುವರಿಯುವ ಮೂಲಕ ಭಾರತದಲ್ಲಿ ಅತೀ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿ ಉಳಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. 2000 ಇಸವಿಯ ನವೆಂಬರ್ ತಿಂಗಳಲ್ಲಿ ಆರೋಗ್ಯ ಸಮಸ್ಯೆಗಳನ್ನು ಮುಂದಿಟ್ಟು ಅವರು ಸ್ವಇಚ್ಛೆಯಿಂದ ಪದತ್ಯಾಗ ಮಾಡಿದ್ದರು.

ಸಿಪಿಐಎಂ ಸಂಸ್ಥಾಪಕರಲ್ಲೊಬ್ಬರಾದ ಬಸು 1996ರಲ್ಲಿ ಪ್ರಧಾನ ಮಂತ್ರಿಯಾಗುವ ಸನಿಹಕ್ಕೆ ತಲುಪಿದ್ದರೂ, ಪಕ್ಷವು ಸಮ್ಮಿಶ್ರ ಸರಕಾರದಲ್ಲಿ ಭಾಗಿಯಾಗುವ ಪ್ರಸ್ತಾವನೆಯನ್ನು ನಿರಾಕರಿಸಿದ ಕಾರಣ ಸಾಧ್ಯವಾಗಿರಲಿಲ್ಲ. ಇದೇ ಕಾರಣದಿಂದ ಆಗಿನ ಜನತಾದಳದ ಮುಖ್ಯಸ್ಥ ಎಚ್.ಡಿ. ದೇವೇಗೌಡ ಪ್ರಧಾನಿಯಾಗಿದ್ದರು.

ಸಿಪಿಐಎಂ ಪಕ್ಷ ಸ್ಥಾಪನೆಯಾದ 1964ರಿಂದ 2008ರವರೆಗೂ ಪಾಲಿಟ್ ಬ್ಯೂರೋ ಸದಸ್ಯರಾಗಿ ಉಳಿದದ್ದು ಅವರ ಮತ್ತೊಂದು ದಾಖಲೆ.
ಸಂಬಂಧಿತ ಮಾಹಿತಿ ಹುಡುಕಿ