ಮೈಪೂರ್ತಿ ಭಸ್ಮ ಬಳಿದುಕೊಂಡಿರುವ, ಉದ್ದುದ್ದ ಕೂದಲುಗಳನ್ನು ಬಿಟ್ಟಿರುವ ನಾಗಾ ಸಾಧುಗಳು ಅಥವಾ ನಗ್ನ ಸಾಧುಗಳು ಕೂಡ ಜಾಗತಿಕ ತಾಪಮಾನ ಏರಿಕೆಯ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ. ಇಲ್ಲಿ ನಡೆಯುತ್ತಿರುವ ಕುಂಭಮೇಳವನ್ನೇ ಅದಕ್ಕಾಗಿ ಸಾಧುಗಳು ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.
ಹರಿದ್ವಾರದಲ್ಲಿ ಜನವರಿ 14ರಂದು ಆರಂಭವಾಗಿರುವ ಕುಂಭಮೇಳ ಏಪ್ರಿಲ್ 28ರವರೆಗೂ ಮುಂದುವರಿಯಲಿದೆ. ಈ ಸಂದರ್ಭದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಸಾಧುಗಳು, ಜಾಗತಿಕ ತಾಪಮಾನ ಏರಿಕೆಯ ವಿರುದ್ಧವೂ ತಮ್ಮ ದನಿಯೆತ್ತಿದ್ದಾರೆ.
PR
ವಿಶ್ವವು ಪ್ರಕೃತಿಯನ್ನು ಈಗ ನಡೆಸಿಕೊಳ್ಳುತ್ತಿರುವಂತೆಯೇ ಮುಂದುವರಿಸಿದಲ್ಲಿ ಗಂಡಾಂತರ ಕಾದಿದೆ ಎಂದು ನಾಗಾ ಸಾಧುಗಳ ಸಂಘಟನೆ 'ಜುನಾ ಅಖರಾ'ದ ಪ್ರಧಾನ ಕಾರ್ಯದರ್ಶಿ ಮಹಾಂತ್ ಹರಿಗಿರಿ ಎಚ್ಚರಿಸಿದ್ದಾರೆ.
ಮಾನವನು ಪ್ರಕೃತಿಯನ್ನು ಕೆಡಿಸಲು ಯತ್ನಿಸಿದರೆ ಅದರ ಪ್ರತಿಫಲ ಸಿಕ್ಕೇ ಸಿಗುತ್ತದೆ. ನಿಸರ್ಗವು ಪ್ರಭಾವಿ ಶಕ್ತಿಯನ್ನು ಹೊಂದಿದ್ದು, ಯಾವುದೇ ಕ್ಷಣದಲ್ಲಿ ಮಾನವನ ಕೆಟ್ಟ ಓಟವನ್ನು ತಡೆ ಹಿಡಿಯಬಹುದು. ನಾವು ಸೃಷ್ಟಿಯನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿರುವುದರಿಂದ ನಮಗೆ ಜಾಗತಿಕ ತಾಪಮಾನ ಏರಿಕೆ, ನೆರೆ ಅಥವಾ ಬರ ಮುಂತಾದುವುದರ ಮೂಲಕ ಪ್ರಕೃತಿ ತಿರುಗೇಟು ನೀಡುತ್ತಿದೆ ಎಂದು ಹರಿದ್ವಾರ ಪಟ್ಟಣದ ಸಮೀಪ ಶಿಬಿರದಲ್ಲಿರುವ ಹರಿಗಿರಿ ಹೇಳಿದ್ದಾರೆ.
ಇದೇ ಸಂಘಟನೆಯ ಗುರು ದೀಪಕ್ ಪುರಿಯವರು ಚೀನಾವನ್ನು ಉದಾಹರಿಸುತ್ತಾ, ಅವರು ಮಂಜು ಸುರಿಸಲು ರಾಕೆಟ್‌ಗಳನ್ನು ಹಾರಿಸಿದರು. ಹಿಮವೇನೋ ಸುರಿಯಿತು, ಆದರೆ ಇದರಿಂದ ಪ್ರಕೃತಿಗೆ ಅಗಾಧ ಹಾನಿಯುಂಟಾಯಿತು. ಪರಿಣಾಮವನ್ನು ಎದುರಿಸಲು ಸಿದ್ಧರಿರದ ಹೊರತು ಇಂತಹ ಕೆಲಸಗಳಿಗೆ ಕೈ ಹಾಕಬಾರದು ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಮೂಲತಃ ಶಸ್ತ್ರಧಾರಿಗಳಾದ ನಾಗಾ ಸಾಧುಗಳು ರಾಷ್ಟ್ರದ ಮಿಲಿಟರಿ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ದೇಶದ ಸಂವಿಧಾನವನ್ನು ನಾವು ಗೌರವಿಸುತ್ತೇವೆ ಎಂದಿದ್ದಾರೆ. ಆದರೆ ದೇಶ ಅನುಭವಿಸುತ್ತಿರುವ ಬೆಲೆಯೇರಿಕೆ, ಭ್ರಷ್ಟಾಚಾರವನ್ನು ಸಹಿಸಲಾಗದು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶವನ್ನು ಮುನ್ನಡೆಸಲು ಯಾವ ರಾಜಕೀಯ ಪಕ್ಷ ಉತ್ತಮ ಎಂಬ ಪ್ರಶ್ನೆಗೆ ಉತ್ತರಿಸಿದ ಸಾಧುವೊಬ್ಬರು, ನಾವು ಯಾವ ಪಕ್ಷದ ಬೆಂಬಲಿಗರೂ ಅಲ್ಲ. ಯಾರು ಬೆಲೆಯೇರಿಕೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದ್ದಾರೋ ಅಂತಹ ಪಕ್ಷ ದೇಶಕ್ಕೆ ಉತ್ತಮ. ನಾವು ರಾಜಕೀಯದಿಂದ ದೂರವೇ ಉಳಿಯುತ್ತೇವೆ ಎಂದರು.