11 ತಿಂಗಳ ಹಿಂದೆ ತಾನು ಮದುವೆಯಾಗಿದ್ದ ನೃತ್ಯಗಾರ್ತಿಯೊಬ್ಬಳನ್ನು, ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಕೊಲೆಗೈದ 32ರ ಹರೆಯದ ಹಣ್ಣಿನ ವ್ಯಾಪಾರಿ ಇರ್ಫಾನ್ ಎಂಬಾತನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಮೇ 17ರಂದು ಸೀಮಪುರಿ ಪ್ರದೇಶದಲ್ಲಿ ತಾನಿದ್ದ ಬಾಡಿಗೆ ಮನೆಯಲ್ಲಿ ತನ್ನ ಎರಡನೇ ಪತ್ನಿ, 25ರ ಹರೆಯದ ಶಹಾನಾಳನ್ನು ಇರ್ಫಾನ್ ಇರಿದು ಕೊಂದಿದ್ದ. ಆರೋಪಿಯು ಉತ್ತರ ಪ್ರದೇಶದ ಬಿಜ್ನೋರ್ ಎಂಬಲ್ಲಿ ಡಿಜೆ ಕಂಪನಿಯೊಂದನ್ನು ನಡೆಸುತ್ತಿದ್ದು, ಶಹಾನಾ ಅಲ್ಲಿ ಡ್ಯಾನ್ಸರ್ ಆಗಿದ್ದಳು. ಅವರಿಬ್ಬರೂ ಪ್ರೇಮಪಾಶದಲ್ಲಿ ಸಿಲುಕಿ, 11 ತಿಂಗಳ ಹಿಂದೆ ಮದುವೆಯಾಗಿದ್ದರು.
ನಂತರ ಅವರು ದೆಹಲಿಗೆ ವಲಸೆ ಬಂದು, ಇರ್ಫಾನ್ ಹಣ್ಣಿನ ವ್ಯಾಪಾರಕ್ಕೆ ಇಳಿದಿದ್ದ. ಆರೋಪಿಗೆ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿಯಿಂದ ನಾಲ್ವರು ಮಕ್ಕಳಿದ್ದಾರೆ.