ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನಸಾಮಾನ್ಯರಿಗೆ 'ಬಜೆಟ್', ಬಂಗಾಲಕ್ಕೆ ಬಕೆಟ್!
(Indian Railways | UPA govt | Mamata Banerjee | Railway Budget 2011)
ಜನಸಾಮಾನ್ಯರಿಗೆ 'ಬಜೆಟ್', ಬಂಗಾಲಕ್ಕೆ ಬಕೆಟ್!
ನವದೆಹಲಿ, ಶುಕ್ರವಾರ, 25 ಫೆಬ್ರವರಿ 2011( 18:55 IST )
ಪಶ್ಚಿಮ ಬಂಗಾಲ ವಿಧಾನಸಭಾ ಚುನಾವಣೆ, ಕಾಂಗ್ರೆಸ್ ಇದೇ ವರ್ಷ ಎದುರಿಸಲಿರುವ ಹಲವು ರಾಜ್ಯಗಳ ಚುನಾವಣೆ, ಬೆಲೆಯೇರಿಕೆಯಿಂದ ತತ್ತರಿಸಿರುವ ಜನತೆ ಮುಂತಾದುವುಗಳನ್ನು ಗಮನದಲ್ಲಿಟ್ಟುಕೊಂಡಿರುವ ಮಮತಾ ಬ್ಯಾನರ್ಜಿ ಸತತ ಮೂರನೇ ವರ್ಷವೂ ಜನಪ್ರಿಯ ಬಜೆಟ್ ಮಂಡಿಸಿದ್ದು, 'ಜನಸಾಮಾನ್ಯನ ಬಜೆಟ್' ಎಂದು ಹೇಳಿದ್ದ ಮಾತನ್ನು ಉಳಿಸಿಕೊಂಡಿದ್ದಾರೆ.
ಬಜೆಟ್‌ನಲ್ಲಿ ತಕ್ಷಣಕ್ಕೆ ರಾಚುವ ಅಂಶ ಪ್ರಯಾಣ ಮತ್ತು ಸರಕು ಸಾಗಣೆ ದರದಲ್ಲಿ ಏರಿಕೆ ಮಾಡದೇ ಇರುವುದು. ಪ್ರಕಟಿಸಲಾಗಿರುವ ಹೊಸ ರೈಲುಗಳಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತಕ್ಕೆ ಹೆಚ್ಚು ಸಂದಿರುವುದನ್ನು ಕಡೆಗಣಿಸಲಾಗದು. ಕರ್ನಾಟಕದವರೇ ಆಗಿರುವ ರೈಲ್ವೆ ಖಾತೆಯ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪರದ್ದು ಇದರಲ್ಲಿ ಪ್ರಾಮಾಣಿಕ ಪ್ರಯತ್ನ ಎನ್ನುವುದನ್ನು ಸ್ಮರಿಸಲೇಬೇಕು.
ಸಾಕಷ್ಟು ಹೊಸ ರೈಲುಗಳು, ಉದ್ಯೋಗಾವಕಾಶ ಒದಗಿಸುವ ಯೋಜನೆಗಳನ್ನು ಪಶ್ಚಿಮ ಬಂಗಾಲಕ್ಕೆ ವಿಸ್ತರಿಸಿರುವುದು ಇತರ ರಾಜ್ಯಗಳ ಸಂಸದರ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಇದಕ್ಕೆ ಮಮತಾ ನೀಡಿರುವ ಸಮರ್ಥನೆ ಸರಿಯಾಗಿಯೇ ಇದೆ. ನನಗೆ ನನ್ನ ರಾಜ್ಯದ ಮೇಲೆ ಅಭಿಮಾನವಿದೆ. ಹಾಗೆಂದು ಇತರ ರಾಜ್ಯಗಳಿಗೆ ನಾನು ಅನ್ಯಾಯ ಮಾಡಿಲ್ಲ. ಲಾಲೂ ಸಚಿವರಾಗಿದ್ದಾಗ ಏನು ಮಾಡಿದ್ದರು ಎಂದು ಟೀಕಾಕಾರರನ್ನು ಬಾಯಿ ಮುಚ್ಚಿಸಿದ್ದಾರೆ.
ಬಜೆಟ್‌ನ ಎದ್ದು ಕಾಣುವ ಪ್ರಮುಖ ಅಂಶಗಳು: * ಪ್ರಯಾಣ ಮತ್ತು ಸರಕು ಸಾಗಣೆ ದರ ಏರಿಕೆ ಮಾಡದೇ ಇರುವುದು. * ರಿಯಾಯಿತಿ ಪ್ರಯಾಣದ ಮಹಿಳಾ ಹಿರಿಯ ನಾಗರಿಕರ ವಯೋಮಿತಿಯನ್ನು 60ರಿಂದ 58ಕ್ಕೆ ಇಳಿಕೆ ಮಾಡಿರುವುದು. * ಪುರುಷ ಹಿರಿಯ ನಾಗರಿಕರ (60 ವರ್ಷ ಮೇಲ್ಪಟ್ಟವರು) ರಿಯಾಯಿತಿಯನ್ನು ಶೇ.30ರಿಂದ 40ಕ್ಕೆ ಏರಿಕೆ ಮಾಡಿರುವುದು. * 56 ಹೊಸ ರೈಲುಗಳನ್ನು ಘೋಷಣೆ ಮಾಡಿರುವುದು. * ಮುಂಗಡ ಬುಕ್ಕಿಂಗ್ ದರವನ್ನು 20ರಿಂದ 10ಕ್ಕೆ (ಎಸಿ) ಹಾಗೂ 10ರಿಂದ 5 ರೂಪಾಯಿಗಳಿಗೆ (ಎಸಿ ರಹಿತ) ಇಳಿಕೆ ಮಾಡಿರುವುದು. * 16,000 ಮಾಜಿ ಸೈನಿಕರನ್ನು ಇಲಾಖೆಗೆ ಸೇರಿಸಿಕೊಳ್ಳುವುದು. * ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿರುವುದು.
ಅಪಘಾತ ಇಳಿಮುಖವಾಗಿದೆ... 7,083 ನಿಲ್ದಾಣಗಳನ್ನು ಹೊಂದಿರುವ, ಪ್ರತಿದಿನ 2.20 ಕೋಟಿ ಜನರು ಪ್ರಯಾಣಿಸುವ ಮತ್ತು 25 ಲಕ್ಷ ಟನ್ ಸರಕು ಪ್ರತಿದಿನ ಸಾಗಿಸಲ್ಟಡುವ ಭಾರತೀಯ ರೈಲ್ವೆ ಅಮೆರಿಕಾ, ರಷ್ಯಾ ಮತ್ತು ಚೀನಾದ ನಂತರದ, ಅಂದರೆ ವಿಶ್ವದಲ್ಲೇ ನಾಲ್ಕನೆ ಸ್ಥಾನವನ್ನು ಹೊಂದಿರುವ ಹೆಮ್ಮೆಯ ಸರಕಾರಿ ಸಂಸ್ಥೆ.
ಈ ಸಂಸ್ಥೆಯಲ್ಲಿರುವ ಸಿಬ್ಬಂದಿಗಳ ಸಂಖ್ಯೆ ಸುಮಾರು 17 ಲಕ್ಷ. ಪ್ರಸಕ್ತ ವರ್ಷ ಸಾವಿರಾರು ಸಂಖ್ಯೆಯ ನೌಕರರನ್ನು ಸೇರಿಸಿಕೊಳ್ಳುವ ಭರವಸೆ ದೀದಿಯವರಿಂದ ಬಂದಿದೆ. ಅದರಲ್ಲೂ ನಿವೃತ್ತ ಸೈನಿಕರನ್ನು ನೇಮಕ ಮಾಡಿಕೊಳ್ಳಲು ಹೊರಟಿರುವುದು ಮಹತ್ವದ ಬೆಳವಣಿಗೆ.
2010-11ರ ಸಾಲಿನಲ್ಲಿ ರೈಲು ಅಪಘಾತ ಪ್ರಮಾಣವು ಭಾರೀ ಕುಸಿತ ಕಂಡಿರುವುದು ಕೂಡ ನನ್ನ ಸಾಧನೆ ಎಂದು ಬ್ಯಾನರ್ಜಿ ಹೇಳಿಕೊಂಡಿದ್ದಾರೆ. ಈ ಹಿಂದಿನ ವರ್ಷ ಶೇ.0.29ರಲ್ಲಿದ್ದ ಅಪಘಾತ ಪ್ರಮಾಣವು ಪ್ರಸಕ್ತ ಶೇ.0.17ಕ್ಕೆ ಇಳಿದಿದೆ. ಕಡಿಮೆ ಅಪಘಾತಗಳಿಗೆ ಸಾಕ್ಷಿಯಾಗುವ ರಾಜ್ಯಗಳಿಗೆ ಉಡುಗೊರೆಯಾಗಿ ಎರಡು ರೈಲುಗಳನ್ನು ಬೋನಸ್ ರೂಪದಲ್ಲಿ ನೀಡುವುದಾಗಿಯೂ ಅವರು ಪ್ರಕಟಿಸಿದ್ದಾರೆ.
ಒಂದು ಲಕ್ಷ ಕೋಟಿ ದಾಟಬೇಕು.... ಭಾರತೀಯ ರೈಲ್ವೆ ವಾರ್ಷಿಕ ಆದಾಯ ಒಂದು ಲಕ್ಷ ಕೋಟಿ ದಾಟಬೇಕು ಮತ್ತು ಅದು 2011-12ರ ಆರ್ಥಿಕ ವರ್ಷದಲ್ಲಿ ಸಾಧ್ಯವಾಗಲಿದೆ ಎನ್ನುವ ಭರವಸೆ ಸಚಿವೆ ಬ್ಯಾನರ್ಜಿಯವರದ್ದು.
ಅದೇ ನಿಟ್ಟಿನಲ್ಲಿ 57,630 ಕೋಟಿ ರೂಪಾಯಿಗಳನ್ನು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲು ರೈಲ್ವೆ ಯೋಚಿಸುತ್ತಿದೆ. ಈ ಹಿಂದೆಂದೂ ಒಂದೇ ವರ್ಷದಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಇಲಾಖೆಯು ವ್ಯಯಿಸಿದ್ದಿಲ್ಲ.