ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಸಲು ಸರ್ಕಾರ ಬದ್ಧವಾಗಿದೆ ಎಂದು ಸಾರಿಗೆ ಸಚಿವ ಆರ್. ಅಶೋಕ್ ಸ್ಪಷ್ಟ ಪಡಿಸಿದ್ದಾರೆ.
ನಗರದಲ್ಲಿ ಬುಧವಾರದಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನು ರೀತಿ ಚುನಾವಣೆ ನಡೆಯಬೇಕಿದ್ದ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಗಳಿಂದಾಗಿ ಚುನಾವಣೆ ವಿಳಂಬವಾಗುತ್ತಿದೆ. ವಿನಃ ಚುನಾವಣೆ ನಡೆಸಲು ಸರ್ಕಾರ ಹಿಂಜರಿಯುತ್ತಿಲ್ಲ ಎಂದು ತಿಳಿಸಿದರು.
ಈ ಕುರಿತು ಹೈಕೋರ್ಟ್ ನೀಡಿರುವ ನೋಟಿಸ್‌ಗೆ ಶೀಘ್ರವೇ ಉತ್ತರ ನೀಡಲಾಗುವುದು ಎಂದು ತಿಳಿಸಿದ ಅವರು, ವಾರ್ಡ್ ವಿಂಗಡಣೆಗೆ ಸಂಬಂಧಿಸಿದಂತೆ 200ಕ್ಕೂ ಹೆಚ್ಚು ಆಕ್ಷೇಪಗಳು ಬಂದಿದ್ದು, ಅವುಗಳಿಗೆ ಉತ್ತರ ನೀಡುವ ಕೆಲಸ ನಡೆಯುತ್ತಿದೆ. ಇದಾದ ನಂತರ ವಾರ್ಡ್ ವಾರು ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯ ನಡೆಯಬೇಕಿದೆ ಎಂದು ವಿವರಣೆ ನೀಡಿದರು.
ಸಾರ್ವಜನಿಕರ ಆಕ್ಷೇಪಕ್ಕೆ ಅವಕಾಶ ನೀಡಬೇಕು. ಒಂದು ವರ್ಷದ ಅವಧಿಯ ಮೇಯರ್ ಬದಲಿಗೆ 5 ವರ್ಷ ಅವಧಿಯ ಮೇಯರ್ ಇನ್ ಕೌನ್ಸಿಲ್ ಜಾರಿಯಾಗಬೇಕೆಂಬುದು ಸರ್ಕಾರದ ಉದ್ದೇಶ. ಇದರಿಂದ 5 ವರ್ಷಗಳ ಕಾಲ ಸುಭದ್ರ ಆಡಳಿತ ನಡೆಸಲು ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು. |
|