ಈಜೀಪುರ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊರಿಸಿದ ಆರೋಪಕ್ಕೆ ತನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಹೇಳಿರುವ ಮುಖ್ಯಮಂತ್ರಿಗಳ ಬೆದರಿಕೆಗೆ ತಾನು ಹೆದರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಈಜೀಪುರದಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಮನೆ ನಿರ್ಮಿಸಿ ಕೊಡುವ ಯೋಜನೆಯನ್ನು ಮೆವರಿಕ್ ಸಂಸ್ಥೆಗೆ ಗುತ್ತಿಗೆ ನೀಡುವ ವಿಚಾರಣದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು 50 ಕೋಟಿ ರೂ.ಲಂಚ ಪಡೆದಿದ್ದಾರೆ ಎಂಬ ಆರೋಪಕ್ಕೆ ತಾನು ಬದ್ಧನಾಗಿರುವೆ ಎಂದು ಪುನರುಚ್ಚರಿಸಿದ್ದಾರೆ.
ಸರ್ಕಾರದ ತಪ್ಪುಗಳನ್ನು ಎತ್ತಿ ತೋರಿಸುವುದು ಪ್ರತಿಪಕ್ಷಗಳ ಕಾರ್ಯ, ಅದನ್ನು ಕಳೆದ ಮೂರು ತಿಂಗಳಿನಿಂದ ಜೆಡಿಎಸ್ ಸಮರ್ಥವಾಗಿ ನಿಭಾಯಿಸಿದೆ. ಇದರಿಂದ ಸರ್ಕಾರ ಇಕ್ಕಟ್ಟಿಗೆ ಸಿಲುಕತೊಡಗಿದ್ದರಿಂದ ಪ್ರತಿಪಕ್ಷಗಳ ನಾಯಕರ ಬಾಯಿ ಮುಚ್ಚಿಸಲು ಇಲ್ಲದ ಪ್ರಯತ್ನ ನಡೆಸಿ, ಬೆದರಿಸಿದರೆ ತಾವು ಜಗ್ಗುವುದಿಲ್ಲ ಎಂದು ಸವಾಲೆಸೆದಿದ್ದಾರೆ.
ಅಲ್ಲದೇ ಈಜೀಪುರ ಪ್ರಕರಣದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಿರುವ ಸರ್ಕಾರದ ಕ್ರಮವನ್ನು ಸ್ವಾಗತಿಸಿದ ಕುಮಾರಸ್ವಾಮಿ, ಲೋಕಾಯುಕ್ತಕ್ಕೆ ಅಧಿಕಾರ ನೀಡದೆ ತನಿಖೆಗೆ ವಹಿಸಿದರೆ ಅದರಿಂದ ಎಷ್ಟು ಸತ್ಯ ಹೊರಬರಲು ಸಾಧ್ಯ ಎಂದು ಪ್ರಶ್ನಿಸಿದ್ದು, ಹೆಚ್ಚಿನ ಅಧಿಕಾರ ನೀಡಿ ತನಿಖೆಗೆ ಆದೇಶ ನೀಡಿ ಎಂದು ಆಗ್ರಹಿಸಿದ್ದಾರೆ. |
|