ಮರಳು ಸಾಗಿಸುವ ಲಾರಿ ಮಾಲೀಕರ ಬೇಡಿಕೆಗಳನ್ನು ಪೂರೈಸುವಲ್ಲಿ ಸರ್ಕಾರ ವಿಫಲವಾಗಿರುವ ಹಿನ್ನೆಲೆಯಲ್ಲಿ ಲಾರಿ ಮಾಲೀಕರು ಮಂಗಳವಾರ ಮುಷ್ಕರವನ್ನು ತೀವ್ರಗೊಳಿಸಿದ್ದಾರೆ.
ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾಗಿದ್ದ ಲಾರಿ ಮುಷ್ಕರ ಇಂದಿನಿಂದ 10 ಜಿಲ್ಲೆಗಳಿಗೂ ವಿಸ್ತಾರಗೊಂಡಿದೆ. ಆಗಸ್ಟ್ 22ರಿಂದ ನಡೆಸುತ್ತಿದ್ದ ಮುಷ್ಕರದಲ್ಲಿ ಸುಮಾರು 2 ಸಾವಿರ ಲಾರಿಗಳು ಮರಳು ಸಾಗಿಸದೆ ಸ್ಥಗಿತವಾಗಿದ್ದವು.
ಅಲ್ಲದೆ, ಈ ಮೊದಲು ಬಿ. ಚನ್ನಾರೆಡ್ಡಿ ನೇತೃತ್ವದಲ್ಲಿ ಲಾರಿ ಮಾಲೀಕರ ಸಂಘ ಹಲವು ಬೇಡಿಕೆಗಳ ಈಡೇರಿಕೆಗಾಗಿ ಮುಷ್ಕರ ನಡೆಸಿತ್ತು. ಈ ಸಂದರ್ಭದಲ್ಲಿ ಷಣ್ಮುಗಪ್ಪ ನೇತೃತ್ವದ ಲಾರಿ ಮಾಲೀಕರ ಸಂಘಗಳ ಒಕ್ಕೂಟವು ಭಾಗವಹಿಸದೆ, ಸರ್ಕಾರದ ಜೊತೆ ಮಾತುಕತೆಗೆ ಮುಂದಾಗಿತ್ತು. ಆದರೆ ಇದೀಗ ಅದೂ ವಿಫಲವಾಗಿರುವ ಹಿನ್ನೆಲೆಯಲ್ಲಿ ಅವರು ಕೂಡ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದರು.
ಈ ಮಧ್ಯೆ ಇಬ್ಬರು ಲಾರಿ ಮಾಲೀಕರು ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸದಿದ್ದರೆ ಮರಳು ಸಾಗಣಿ ಜತೆಗೆ ಕಟ್ಟಡ ಸಾಮಗ್ರಿ ಸಾಗಣೆ ಮಾಡುವ ಎಲ್ಲಾ ಲಾರಿಗಳ ಓಡಾಟವನ್ನು ಬಂದ್ ಮಾಡಲಾಗುವುದು ಎಂದು ಲಾರಿ ಮಾಲೀಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟಗಳ ಅಧ್ಯಕ್ಷ ಷಣ್ಮುಗಪ್ಪ ಎಚ್ಚರಿಕೆ ನೀಡಿದ್ದಾರೆ.