ಕೆಂಪೇಗೌಡ ಬಸ್ ನಿಲ್ದಾಣವನ್ನು 1,400ಕೋಟಿ ರೂಪಾಯಿ ವೆಚ್ಚದಲ್ಲಿ ವಿಶ್ವ ದರ್ಜೆಯಲ್ಲಿ ಉನ್ನತೀಕರಿಸುವುದಾಗಿ ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ನಗರದಲ್ಲಿ ಕೆಎಸ್‌ಆರ್‌ಟಿಸಿ ಟಿಕೆಟ್ ಕಾಯ್ದಿರಿಸುವಿಕೆ ಏಜೆಂಟರ್‌ಗಳ ಸಂಘದ 9ನೆ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಕೊಡಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನ ಹೃದಯ ಭಾಗದಲ್ಲಿ ಇರುವ ಕೆಂಪೇಗೌಡ ಬಸ್ ನಿಲ್ದಾಣವನ್ನು ವಿಶ್ವದರ್ಜೆಗೆ ಏರಿಸಲು ಮುಂದಾಗಿರುವುದಾಗಿ ಹೇಳಿದರು.
450ಕೋಟಿ ರೂಪಾಯಿ ವೆಚ್ಚದಲ್ಲಿ ಈಗಾಗಲೇ ಬೆಂಗಳೂರಿನ ನಾಲ್ಕು ದಿಕ್ಕುಗಳಲ್ಲೂ ಸ್ಯಾಟಲೈಟ್ ಬಸ್ ನಿಲ್ದಾಣಗಳನ್ನು ಸುಧಾರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದ ಅವರು, ಸಾರಿಗೆ ಇಲಾಖೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಇಂದಿನ ಸಚಿವ ಸಂಪುಟ ಸಭೆಯಲ್ಲಿ 250ಕೋಟಿ ರೂ.ಮಂಜೂರಾಗಿರುವುದಾಗಿ ತಿಳಿಸಿದರು.
ಕೆಎಸ್‌ಆರ್‌ಟಿಸಿಯಲ್ಲೂ ಸಾಕಷ್ಟು ಸುಧಾರಣೆ ಕ್ರಮ ಕೈಗೊಳ್ಳಲಾಗಿದೆ ಎಂದ ಅವರು, ವಿಶ್ವದಲ್ಲಿ ಪ್ರತಿಷ್ಠಿತ ಕಂಪೆನಿಗಳ ಬಸ್‌ಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ ಎಂದರು. ಈಗಾಗಲೇ ಮರ್ಸಿಡಿಸ್ ಬೆಂಜ್ ಬಸ್ ಜಪಾನ್ ಕಂಪೆನಿ ಹಾಗೂ ವೋಲ್ವೊ ಕಂಪೆನಿಗಳ ಸುಸಜ್ಜಿತ ಬಸ್‌ಗಳನ್ನು ಖರೀದಿಸಿದ್ದು, ಪ್ರಸ್ತುತ ಕೆಎಸ್‌ಆರ್‌ಟಿಸಿ 20ಸಾವಿರ ಬಸ್‌ಗಳನ್ನು ಹೊಂದಿದೆ ಎಂದು ವಿವರಿಸಿದರು.