ಇಲ್ಲಿನ ತಾಲ್ಲೂಕು ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆಯಬೇಕಿದ್ದ ಚುನಾವಣೆ, ಸದಸ್ಯೆಯೊಬ್ಬರ ಅಪಹರಣದಿಂದಾಗಿ ನಾಟಕೀಯ ತಿರುವು ಕಂಡು, ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ವರದಿಯಾಗಿದೆ.
ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಒಟ್ಟು 27 ಸದಸ್ಯರಿದ್ದು, ಅದರಲ್ಲಿ ಕಾಂಗ್ರೆಸ್ 10, ಜೆಡಿಎಸ್ 4, ಬಿಜೆಪಿ 12 ಹಾಗೂ ಒರ್ವ ಪಕ್ಷೇತರ ಸದಸ್ಯರಿದ್ದಾರೆ. ಆದರೆ ಬನ್ನೇರುಘಟ್ಟ ಸದಸ್ಯೆಯಾದ ರತ್ನಮ್ಮ ಎಂಬುವವರನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಅಪಹರಿಸಿದ್ದಾರೆಂದು ಬಿಜೆಪಿಯು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ದೂರು ದಾಖಲಾದ ಹಿನ್ನೆಲೆಯಲ್ಲಿ ಶಾಂತಿಭಂಗವಾಗದಂತೆ ಕ್ರಮ ಕೈಗೊಳ್ಳಲು ಚುನಾವಣೆಯು ಮುಂದೂಡಲ್ಪಟ್ಟಿದೆಯೆಂದು ಚುನಾವನಾಧಿಕಾರಿ ಸಿದ್ದಯ್ಯ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ವೀರಭದ್ರಪ್ಪ ಅವರಿಗೆ ವಿವರಣಾ ಪತ್ರವನ್ನು ನೀಡಿದ್ದಾರೆಂದು ತಿಳಿದುಬಂದಿದೆ.
ಈ ಕುರಿತು ನಂತರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು, ತಾಲ್ಲೂಕು ಪಂಚಾಯಿತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿ 14 ಸದಸ್ಯರ ಬಲವಿದ್ದು ಗೆಲವು ತಮ್ಮದೇ ಆಗಿರುವಾಗ ಸದಸ್ಯೆಯನ್ನೇಕೆ ಅಪಹರಿಸಬೇಕು? ಸೋಲಿನ ಭೀತಿಯಲ್ಲಿರುವ ಬಿಜೆಪಿಯೇ ಸ್ವತಃ ಈ ರೀತಿಯ ಅಪಹರಣದ ನಾಟಕವಾಡಿ ನಂತರ ತಮ್ಮ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸಿದರು.