ವರುಣನ ಆರ್ಭಟದಿಂದ ರಾಜ್ಯದಲ್ಲಿ ತಲೆದೋರಿರುವ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ನೆರವು ನೀಡುವಂತೆ ಒತ್ತಾಯಿಸಿ ಕಾಂಗ್ರೆಸ್ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಲು ನಿರ್ಧರಿಸಿರುವ ಬೆನ್ನಲ್ಲೇ, ಕಾಂಗ್ರೆಸ್ಸಿಗರು ಕರೆದ್ರೆ ನಾನೂ ಅವರೊಂದಿಗೆ ಹೋಗಲು ಸಿದ್ದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಶಯ ವ್ಯಕ್ತಪಡಿಸಿದ್ದಾರೆ.
ಎಡೆಬಿಡದೆ ಸುರಿದ ಮಳೆಯಿಂದಾಗಿ ರಾಜ್ಯದಲ್ಲಿ ಲಕ್ಷಾಂತರ ರೂಪಾಯಿಯ ಬೆಳೆ, ಆಸ್ತಿ ಹಾನಿಯಾಗಿದ್ದರೆ, ಮತ್ತೊಂದೆಡೆ ಸಾವಿರಾರು ಜನರು ಮನೆ-ಮಠ ಕಳೆದುಕೊಂಡು ಕಂಗಾಲಾಗಿದ್ದಾರೆ. ಆ ನಿಟ್ಟಿನಲ್ಲಿ ರಾಜ್ಯಕ್ಕೆ ಹೆಚ್ಚಿನ ನೆರವು ನೀಡುವಂತೆ ಒತ್ತಾಯಿಸಲು ಕಾಂಗ್ರೆಸ್ ನಿಯೋಗ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡುವುದಾಗಿ ಹೇಳಿತ್ತು.
ಗುರುವಾರ ಸಚಿವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಕಾಂಗ್ರೆಸ್ಸಿಗರು ಕರೆದ್ರೆ ನಾವೂ ಅವರೊಂದಿಗೆ ನಿಯೋಗದಲ್ಲಿ ತೆರಳಲು ಸಿದ್ದರಿದ್ದೇವೆ ಎಂದರು. ದಯವಿಟ್ಟು ನಮ್ಮನ್ನೂ ನಿಮ್ಮೊಂದಿಗೆ ಕರೆದೊಯ್ಯಿರಿ ಎಂದು ಮನವಿ ಮಾಡಿಕೊಂಡರು.
ರಾಜ್ಯದಲ್ಲಿ ತಲೆದೋರಿರುವ ಸಮಸ್ಯೆ ಪರಿಹಾರಕ್ಕೆ ಮತ್ತು ಹೆಚ್ಚಿನ ಆರ್ಥಿಕ ನೆರವು ನೀಡುವಂತೆ ಕೋರಲು ಕಾಂಗ್ರೆಸ್ ತೆರಳುತ್ತಿದೆ. ಇಬ್ಬರ ಉದ್ದೇಶವೂ ಒಂದೇ ಆಗಿರುವುದರಿಂದ ಪ್ರಧಾನಿಯವರನ್ನು ಭೇಟಿಯಾಗಲು ತೆರಳುತ್ತಿರುವ ಕಾಂಗ್ರೆಸ್ ನಿಯೋಗದೊಂದಿಗೆ ನಾವೂ ತೆರಳಲು ತಯಾರಿದ್ದೇವೆ ಎಂದು ಈ ಸಂದರ್ಭದಲ್ಲಿ ಹೇಳಿದರು.