ಕೇಂದ್ರ ಸಚಿವರು ರಾಜ್ಯದ ಪ್ರತಿನಿಧಿಗಳಲ್ಲ: ಉಗ್ರಪ್ಪ ಸ್ಪಷ್ಟನೆ
ಬೆಂಗಳೂರು, ಬುಧವಾರ, 21 ಅಕ್ಟೋಬರ್ 2009( 19:26 IST )
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಕಾಂಗ್ರೆಸ್ ಸಚಿವರು ಭಾಗವಹಿಸಿದ್ದು ಕೇಂದ್ರದ ಪ್ರತಿನಿಧಿಗಳಾಗಿಯೇ ಹೊರತು, ರಾಜ್ಯದ ಪ್ರತಿನಿಧಿಗಳಾಗಿ ಅಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ವಿ.ಎಸ್. ಉಗ್ರಪ್ಪ ಸ್ಪಷ್ಟಪಡಿಸಿದ್ದಾರೆ.
ಹೆಚ್ಚಿನ ನೆರೆ ಪರಿಹಾರ ನೀಡಬೇಕೆಂದು ಕೋರಿ ರಾಜ್ಯದಿಂದ ತೆರಳಿದ್ದ ಸರ್ವಪಕ್ಷ ನಿಯೋಗದಲ್ಲಿ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಪಾಲ್ಗೊಂಡಿಲ್ಲ. ಕೇಂದ್ರದ ಸಚಿವರು ಭಾಗವಹಿಸಿದ್ದರೆ, ಅದು ಕೇಂದ್ರದ ಪ್ರತಿನಿಧಿಗಳಾಗಿಯೇ ಹೊರತು ರಾಜ್ಯದ ಪ್ರತಿನಿಧಿಗಳಾಗಿ ಹೋಗಿರಲಿಲ್ಲ. ಅವರು ನಿಯೋಗದಲ್ಲಿ ಭಾಗಿಯಾಗಿಲ್ಲ ಎಂದು ಉಗ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ರಾಜ್ಯದ ಕಾಂಗ್ರೆಸ್ ನಾಯಕರ ನಿಲುವು ಬದಲಾಗಿಲ್ಲ. ರಾಜ್ಯದ ಹಿತವನ್ನು ಕಾಪಾಡುವ ನಮ್ಮ ಧ್ಯೇಯ ಬದಲಾಗದು ಎಂದು ಅವರು ತಿಳಿಸಿದ್ದಾರೆ.
ಸರ್ವಪಕ್ಷ ನಿಯೋಗವನ್ನು ತುರ್ತಾಗಿ ಕರೆದೊಯ್ಯುವ ಅಗತ್ಯವಿಲ್ಲ ಎಂದಿದ್ದ ಯಡಿಯೂರಪ್ಪ ದಿಢೀರನೆ ನಿಯೋಗ ಒಯ್ದಿದ್ದಾರೆ. ಅಲ್ಲದೆ ಮನವಿ ಪತ್ರದಲ್ಲಿ ಏನಿದೆ ಎಂಬ ಮಾಹಿತಿಯನ್ನೂ ಪ್ರತಿಪಕ್ಷಗಳಿಗೆ ನೀಡಿರಲಿಲ್ಲ ಎಂದು ಉಗ್ರಪ್ಪ ಇದೇ ಸಂದರ್ಭದಲ್ಲಿ ಸರಕಾರದ ವಿರುದ್ಧ ಕಿಡಿ ಕಾರಿದರು.
ಕೇಂದ್ರ ತಂಡಕ್ಕೆ ವಿವರಿಸಿ.. ನೆರೆ ನಷ್ಟದ ಅಂದಾಜು ಮಾಡಲು ಬಂದಿರುವ ಕೇಂದ್ರದ ಅಧ್ಯಯನ ತಂಡಕ್ಕೆ ಸಂಪೂರ್ಣ ಸಹಕಾರ ನೀಡುವಂತೆ ಸರಕಾರವನ್ನು ಆಗ್ರಹಿಸಿದ ಅವರು, ರಾಜ್ಯದ ಸಚಿವರು ಅಧ್ಯಯನ ತಂಡದ ಜತೆಗಿರಬೇಕು; ತಂಡದ ಜತೆಯೇ ಮೊಕ್ಕಾಂ ಹೂಡಿ ವಿವರ ಒದಗಿಸಬೇಕೆಂದು ಸಲಹೆ ನೀಡಿದರು.