ಸಂತ್ರಸ್ತರ ವೀಕ್ಷಣೆ ಬಿಟ್ಟು ಸಿನಿಮಾ ನೋಡಿದ ಶ್ರೀರಾಮುಲು!
ಶ್ರೀರಾಮುಲು 'ಮನಸಾರೆ' ಮೋಜನ್ನು ವಿಚಾರಿಸುವೆ: ಸಿಎಂ
ಬೆಂಗಳೂರು, ಗುರುವಾರ, 22 ಅಕ್ಟೋಬರ್ 2009( 13:18 IST )
ನೆರೆ ಸಂತ್ರಸ್ತರ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದನ್ನು ಬಿಟ್ಟು ಆರೋಗ್ಯ ಸಚಿವ ಶ್ರೀರಾಮಲು ಗದಗ್‌ನಲ್ಲಿ 'ಮನಸಾರೆ' ಚಿತ್ರವನ್ನು ವೀಕ್ಷಿಸಲು ತೆರಳಿದ್ದರು ಎಂಬ ಸುದ್ದಿಗಳು ಹರಡಿರುವ ಹಿನ್ನೆಲೆಯಲ್ಲಿ, ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪ, ಈ ಕುರಿತು ಅವರೊಂದಿಗೆ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಯಾವ ಕಾರಣಕ್ಕೆ ಸಚಿವರು ಚಿತ್ರವೀಕ್ಷಣೆಯಲ್ಲಿ ತೊಡಗಿದ್ದರು ಎಂದು ಇನ್ನೂ ಗೊತ್ತಾಗಿಲ್ಲ. ಸಂತ್ರಸ್ತರು ಸಂಕಷ್ಟವನ್ನು ಎದುರಿಸುತ್ತಿರುವಾಗ ಹಾಗೂ ಸರ್ಕಾರ ತುರ್ತುಸ್ಥಿತಿಯಲ್ಲಿ ಸಿಲುಕಿಕೊಂಡಿರುವಾಗ ಪರಿಸ್ಥಿತಿಯ ಜರೂರಿನ ಬಗ್ಗೆ ಅವರು ಅರ್ಥಮಾಡಿಕೊಳ್ಳಬೇಕಿತ್ತು. ಈ ನಿಟ್ಟಿನಲ್ಲಿ ಇದನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುವುದು ಎಂದರು.
ಇದನ್ನು ಹೊರತುಪಡಿಸಿ, ಯಾವ್ಯಾವ ಸಚಿವರು ಎಲ್ಲೆಲ್ಲಿ ಪರಿಹಾರ ಕಾರ್ಯದಲ್ಲಿ ನಿರತರಾಗಿದ್ದಾರೆಂಬ ಮಾಹಿತಿಯನ್ನು ಸದ್ಯದಲ್ಲಿಯೇ ನೀಡಲಾಗುತ್ತದೆ. ಎಲ್ಲ ಸಚಿವರು, ಶಾಸಕರ ಸಹಕಾರದಿಂದಲೇ ಪರಿಹಾರದ ಕಾರ್ಯ ಸುಲಲಿತವಾಗಿ ಸಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ವಿವರಿಸಿದರು.
ರಾಜ್ಯ ವಿಧಾನಮಂಡಲದ ಉಭಯ ಸದನಗಳ ಅಧಿವೇಶನವನ್ನು ನವೆಂಬರ್‌ನಲ್ಲಿ ನಡೆಸುವ ಕುರಿತು ಚಿಂತಿಸಲಾಗುವುದು ಎಂದ ಅವರು, ಗದಗ ಜಿಲ್ಲೆಯಲ್ಲಿ ಸಾಮೂಹಿಕ ರಜೆ ಹಾಕುವ ಗ್ರಾಮ ಲೆಕ್ಕಿಗರ ಬೆದರಿಕೆಯನ್ನು ಸರಿಪಡಿಸಲಾಗಿದೆ. ಅಧಿಕಾರಿ ಮತ್ತು ನೌಕರರಲ್ಲಿ ಭಯ ಉಂಟಾಗಿ ಕೆಲಸವನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಲಿ ಎಂಬ ಉದ್ದೇಶದಿಂದ ಅಮಾನತು ಕ್ರಮಕ್ಕೆ ಕೈಹಾಕಲಾಗಿತ್ತು ಎಂದು ಸ್ಪಷ್ಟಪಡಿಸಿದರು.