ಹೆಚ್ಚಿನ ಪರಿಹಾರ ನೀಡಿ ಎಂದು ಒತ್ತಾಯಿಸಲು ನಿಯೋಗವನ್ನು ಕರೆದೊಯ್ಯುವುದೇ ದುರಭ್ಯಾಸ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವರುಣನ ಆರ್ಭಟದಿಂದ ರಾಜ್ಯದಲ್ಲಿ ಸಂಕಷ್ಟದ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಪರಿಹಾರ ನೀಡುವಂತೆ ಒತ್ತಾಯಿಸುವ ಸಲುವಾಗಿ ನಿಯೋಗದೊಂದಿಗೆ ತೆರಳಿ ಪ್ರಧಾನಿಯನ್ನು ಭೇಟಿ ಮಾಡುವುದಾಗಿ ಕಾಂಗ್ರೆಸ್ ತಿಳಿಸಿತ್ತು. ಅಲ್ಲದೇ ಕಾಂಗ್ರೆಸ್ಸಿಗರು ಕರೆದರೆ ತಾವೂ ಕೂಡ ನಿಯೋಗದೊಂದಿಗೆ ತೆರಳುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಆಶಯ ವ್ಯಕ್ತಪಡಿಸಿದ್ದರು.
ಇದಕ್ಕೆ ಕಡೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಗೌಡರು, ನಾನು ಈವರೆಗೂ ನಿಯೋಗವನ್ನು ಕರೆದೊಯ್ದಿಲ್ಲ, ಅಲ್ಲದೆ ಇನ್ನು ಮುಂದೆಯೂ ನಿಯೋಗವನ್ನು ಕರೆದೊಯ್ಯಲಾರೆ ಎಂದು ಹೇಳಿದರು.
ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾಗಿದೆ, ರೈತರು ಸಂಕಷ್ಟದಲ್ಲಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರವೇ ಹೆಚ್ಚಿನ ನೆರವು ನೀಡಬೇಕು. ಆದರೆ ನಿಯೋಗವನ್ನು ಕರೆದೊಯ್ಯುವುದು ದುರಭ್ಯಾಸ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.