ಹಿಂದೂ ಧರ್ಮದಲ್ಲಿನ ಕಟ್ಟಳೆಗಳನ್ನು ಬಡವರು ಪಾಲಿಸಲು ಕಷ್ಟಸಾಧ್ಯವಾಗುತ್ತಿರುವ ಕಾರಣ ಅವರು ಇತರ ಧರ್ಮಗಳತ್ತ ವಾಲುತ್ತಿದ್ದಾರೆ ಎಂದು ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಅಭಿಪ್ರಾಯಪಟ್ಟರು.
ಹಿಂದೂ ಧರ್ಮದ ಆಚರಣೆಗಳು ಕಠಿಣತೆಯಿಂದ ಕೂಡಿವೆ. ಇದರ ಸಂಪ್ರದಾಯ ಮತ್ತು ಆಚರಣೆಗಳನ್ನು ಪಾಲಿಸಲು ಬಡವರಿಗೆ ಸಾಧ್ಯವಾಗುತ್ತಿಲ್ಲ. ಇದು ಅಪಾರ ವೆಚ್ಚವನ್ನೂ ಬಯಸುತ್ತದೆ. ಇಂತಹ ಸಂಪ್ರದಾಯಗಳು ಇಂದು-ನಿನ್ನೆ ಕಾಣಿಸಿಕೊಂಡದ್ದಲ್ಲ. ಅನಾದಿಕಾಲದಿಂದಲೂ ಪಾಲಿಸಿ ಕೊಂಡು ಬಂದವುಗಳು ಎಂದರು.
ಗುರುವಾರ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ನಡದ ‘ಪಂಪನ ಕೃತಿಗಳ ಸಾಂಸ್ಕೃತಿಕ ಅನುಸಂಧಾನ’ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ ಈ ವಿಶ್ಲೇಷಣೆ ನಡೆಸಿದರು.
ಮಾತು ಮುಂದುವರಿಸಿದ ಅವರು, ಇಂತಹ ಕಾರಣಗಳಿಂದ ಹಿಂದೂ ಧರ್ಮೀಯರು ಇತರೇ ಧರ್ಮಗಳತ್ತ ಒಲವು ತೋರಿಸುತ್ತಾರೆ. ಬೇರೆ ಧರ್ಮಗಳಲ್ಲಿ ಸರಳ ಆಚರಣೆಗಳು ಇರುವುದರಿಂದ ಅವು ಪಥ್ಯವೆನಿಸುತ್ತವೆ. ಜೈನ ಮತ್ತು ಬೌದ್ಧ ಧರ್ಮಗಳು ನೆಲೆ ಕಂಡುಕೊಳ್ಳಲು ಕೂಡ ಇದೇ ಕಾರಣ. ಅಲ್ಲಿರುವ ಸಮಾನತೆ, ಸಹಿಷ್ಣುತೆ ಮತ್ತು ಸೌಹಾರ್ದ ಬೋಧನೆಗಳು ಜನರನ್ನು ಆಕರ್ಷಿಸಿದವು ಎಂದು ಅವರು ತನ್ನ ಅನಿಸಿಕೆ ವ್ಯಕ್ತಪಡಿಸಿದರು.
ಕರ್ನಾಟಕಕ್ಕೂ ಜೈನ ಧರ್ಮಕ್ಕೂ ಗಾಢ ಸಂಬಂಧವಿದ್ದು, ಸೌಹಾರ್ದ ಪರಂಪರೆಯನ್ನು ಕಾಣಲು ಸಾಧ್ಯವಾಗಿದೆ ಎಂದೂ ರಾಜ್ಯಪಾಲರು ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಪತ್ನಿ ಪ್ರಫುಲ್ಲತಾ ಭಾರದ್ವಾಜ್, ಸಾಹಿತಿ ಡಾ. ಹಂಪ ನಾಗರಾಜಯ್ಯ, ನಿಘಂಟು ತಜ್ಞ ಪ್ರೊ. ಜಿ. ವೆಂಕಟಸುಬ್ಬಯ್ಯ, ಪ್ರೊ. ಎನ್. ಬಸವಾರಾಧ್ಯ, ಶಬ್ದಶಾಸ್ತ್ರಜ್ಞ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿ, ಕಮಲಾ ಹಂಪನಾ, ಪ್ರೊ. ಅ.ರಾ. ಮಿತ್ರಾ, ಬಿಎನ್‌ಇಎಸ್ ಅಧ್ಯಕ್ಷ ಬಿ.ಎಸ್.ಅಶ್ವತ್ಥ್ನಾರಾಯಣ ಮುಂತಾದವರು ಪಾಲ್ಗೊಂಡಿದ್ದರು.