ಬಳ್ಳಾರಿಯ ಗಣಿಧಣಿಗಳು ಮತ್ತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಪಸ್ವರ ಎತ್ತುವ ಮೂಲಕ ಬಿಜೆಪಿಯೊಳಗೆ ಮುಸುಕಿನ ಗುದ್ದಾಟ ಮುಂದುವರಿದಂತಾಗಿದೆ.
ಗುರುವಾರ ಗಣಿ ಧಣಿಗಳ ಪಾಳಯದಲ್ಲಿ ಬಿರುಸಿನ ಚಟುವಟಿಕೆ ಕಾಣಿಸಿಕೊಂಡಿದ್ದು, ರಾಜ್ಯ ಸಚಿವ ಸಂಪುಟ ಸಭೆಗೂ ಮುನ್ನ ಹಾಗೂ ನಂತರ ತಮ್ಮ ಬೆಂಬಲಿಗ ಸಚಿವರು, ಶಾಸಕರೊಂದಿಗೆ ಸತತ ರಹಸ್ಯ ಸಭೆಗಳನ್ನು ನಡೆಸಿರುವುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಸಭೆಯಲ್ಲಿ ಸಚಿವರಾದ ಬಾಲಚಂದ್ರ ಜಾರಕಿಹೊಳಿ, ಆನಂದ್ ಅಸ್ನೋಟಿಕರ್, ಶಿವನಗೌಡ ನಾಯಕ್, ಡಿ.ಸುಧಾಕರ್, ಗೂಳಿಹಟ್ಟಿ ಶೇಖರ್ ಸೇರಿದಂತೆ ಹಲವು ಶಾಸಕರೂ ಪಾಲ್ಗೊಂಡಿದ್ದರು ಎನ್ನಲಾಗಿದೆ. ಸಚಿವರಾದ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಮತ್ತು ಶ್ರೀರಾಮುಲು ಅವರಿಗೆ ಸಂಬಂಧಿಸಿದ ಒಂದೊಂದು ಪ್ರಕರಣವೂ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದರ ಜತೆಗೆ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ.
ಕಬ್ಬಿಣದ ಅದಿರು ಸಾಗಣೆಗೆ ಸುಂಕ ಏಕೆ?, ತಮ್ಮ ಅಭಿಪ್ರಾಯ ಕೇಳದೆ ಆಸರೆ ಯೋಜನೆ ಸಂಯೋಜಕರ ನೇಮಕವೇಕೆ?, ಗದಗ ಜಿಲ್ಲಾಧಿಕಾರಿ ಏಕಾಏಕಿ ಎತ್ತಂಗಡಿ ಪ್ರಕರಣ ಗಣಿ ಧಣಿಗಳ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ.