ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ಚುನಾವಣೆಗೆ ನಡೆದ ಮತದಾನದಲ್ಲಿ ಸಮಾಜ ಕಲ್ಯಾಣ ಸಚಿವ ಸಿ.ಸುಧಾಕರ್ ತಮ್ಮ ಮತವನ್ನು ಚಲಾಯಿಸದೆ ದೂರ ಉಳಿದಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.
ಸುಧಾಕರ್, ಬಿಜೆಪಿ ಅಭ್ಯರ್ಥಿ ತಿಪ್ಪಾರೆಡ್ಡಿ ಪರ ಮತ ಚಲಾಯಿಸದೆ ಬೆಂಗಳೂರಿನಲ್ಲೇ ಇದ್ದದ್ದು ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಏನಾದರಾಗಲಿ ತಿಪ್ಪಾರೆಡ್ಡಿ ಅವರನ್ನು ಮೇಲ್ಮನೆಗೆ ಕಳುಹಿಸಲೇಬೇಕು ಎಂದು ಮುಖ್ಯಮಂತ್ರಿ ಇಲ್ಲಿನ ಸಚಿವರು, ಶಾಸಕರಿಗೆ ಕಟ್ಟಪ್ಪಣೆ ಮಾಡಿದ್ದರೂ ಕೂಡ ಸುಧಾಕರ್ ಕ್ಷೇತ್ರ ಬಿಟ್ಟಿದ್ದು ಏಕೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಕಳೆದ ಕೆಲವು ದಿನಗಳಿಂದ ಚುನಾವಣಾ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳದ ಸುಧಾಕರ್ ಅವರ ಬೆಂಬಲಿಗರು ಸಹ ಅವರ ದಾರಿಯನ್ನೇ ಹಿಡಿದಿದ್ದಾರೆ. ಮತ ಚಲಾಯಿಸದೆ ಇರಲು ಕಾರಣವೇನು ಎಂಬ ಬಗ್ಗೆ ಇನ್ನೂ ಮಾಹಿತಿ ಲಭ್ಯವಾಗಿಲ್ಲ.
ಮತ ಚಲಾಯಿಸದ ಪ್ರಮುಖರು: ರಾಜ್ಯಸಭಾ ಸದಸ್ಯರೂ ಆದ ಕೇಂದ್ರ ಸಚಿವ ಎಸ್.ಎಂ.ಕೃಷ್ಣ, ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಸ್, ರಾಮಸ್ವಮಿ, ಚಿತ್ರದುರ್ಗದ ಬಿಜೆಪಿ ಸಚಿವ ಸುಧಾಕರ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಕಂಬಾರ್ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ ಚಲಾಯಿಸಿಲ್ಲ.