ಬಿಜೆಪಿಯೇನಾದರೂ ವಿಧಾನ ಪರಿಷತ್ ಚುನಾವಣೆಯಲ್ಲಿ 16 ಸ್ಥಾನ ಗೆದ್ದರೆ ನಾನು ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಆಡಳಿತ ಪಕ್ಷಕ್ಕೆ ಸವಾಲು ಹಾಕಿರುವ ಡಿ.ಕೆ. ಶಿವಕುಮಾರ್, ಹಾಗೆ ನಡೆಯದಿದ್ದರೆ ಮುಖ್ಯಮಂತ್ರಿಯವರು ರಾಜೀನಾಮೆ ನೀಡುವರೇ ಎಂದು ಪ್ರಶ್ನಿಸಿದ್ದಾರೆ.
ಶುಕ್ರವಾರ ರಾಮನಗರದ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ತನ್ನ ಹಕ್ಕನ್ನು ಚಲಾಯಿಸಿದ ನಂತರ ಮಾತನಾಡಿದ ಅವರು, ಬಿಜೆಪಿ ಈ ಬಾರಿ ಮಿಂಚಲು ಸಾಧ್ಯವೇ ಇಲ್ಲ ಎಂಬ ಭರವಸೆಯ ಮಾತುಗಳನ್ನಾಡಿದರು.
NRB
ಅಲ್ಲದೆ ಇತ್ತೀಚೆಗಷ್ಟೇ ಮುಖ್ಯಮಂತ್ರಿಗಳು 'ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಕನಿಷ್ಠ 16 ಸ್ಥಾನಗಳನ್ನು ಗೆದ್ದುಕೊಳ್ಳಲಿದೆ' ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಹಾಗಾದಲ್ಲಿ ರಾಜೀನಾಮೆ ನೀಡಲು ನಾನು ಸಿದ್ಧನಿದ್ದೇನೆ; ಅವರೂ ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದರು.
ಬಿಜೆಪಿಗೆ ಆಡಳಿತ ಮಾಡಿ ಗೊತ್ತಿಲ್ಲ. ಅನುಭವವೇ ಇಲ್ಲವೆನ್ನುವುದು ಅವರ ಆಡಳಿತ ವೈಖರಿಯಿಂದಲೇ ಬಹಿರಂಗವಾಗುತ್ತಿದೆ. ಅದರ ಅಂತ್ಯದ ದಿನಗಳ ಆರಂಭವಾಗಿದೆ. ಅವರು ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲಷ್ಟೇ ಅರ್ಹರು. ಯಾಕೆಂದರೆ ಅಲ್ಲಿ ಅವರಿಗೆ ಸಾಕಷ್ಟು ಅನುಭವವಿದೆ ಎಂದು ಶಿವಕುಮಾರ್ ಮಾರ್ಮಿಕವಾಗಿ ಬಿಜೆಪಿಯನ್ನು ಚುಚ್ಚಿದರು.
ಅದೇ ಹೊತ್ತಿಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗ್ತಾರೆ, ಕಾದು ನೋಡಿ ಎಂಬ ಮಾಜಿ ಮುಖ್ಯಮಂತ್ರಿ ಧರಂ ಸಿಂಗ್ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅದು ಅವರ ವೈಯಕ್ತಿಕ ಅಭಿಪ್ರಾಯ; ಈಗಿನ ಪರಿಸ್ಥಿತಿ ನೋಡುವಾಗ ಅಂತಹ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಹಿಂಬಾಗಿಲಿನಿಂದ ಹೋಗಿ ಅಧಿಕಾರ ಪಡೆಯುವ ಅಗತ್ಯ ಅಥವಾ ಅನಿವಾರ್ಯತೆ ಕಾಂಗ್ರೆಸ್ಸಿಗಿಲ್ಲ. ಏನಾಗುತ್ತದೋ ಕಾದು ನೋಡೋಣ ಎಂದು ತಿಳಿಸಿದರು.