ಚೆನ್ನಪಟ್ಟಣ, ಶುಕ್ರವಾರ, 18 ಡಿಸೆಂಬರ್ 2009( 12:31 IST )
WD
ವಿಧಾನ ಪರಿಷತ್ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಪಡೆಯಬೇಕೆಂಬ ಆಕಾಂಕ್ಷೆ ಹೊಂದಿರುವ ರಾಜಕೀಯ ಪಕ್ಷಗಳು ಸ್ಥಳೀಯ ಸಂಸ್ಥೆ ಮತದಾರರಿಗೆ ವಿವಿಧ ರೀತಿಯ ಆಮಿಷವೊಡ್ಡಿದ್ದು, ಆಡಳಿತಾರೂಢ ಬಿಜೆಪಿ ಮಾತ್ರ ಮತದಾನವನ್ನೇ ಮಾಡಬೇಡಿ, 25 ಸಾವಿರ ಕೊಡುತ್ತೇವೆ ಎಂದು ಆಮಿಷವೊಡ್ಡಿದ ಸ್ವಾರಸ್ಯಕರ ಘಟನೆ ವರದಿಯಾಗಿದೆ.
ಕಾಂಗ್ರೆಸ್ ಅಥವಾ ಜೆಡಿಎಸ್ ಸ್ಥಳೀಯ ಸಂಸ್ಥೆಗಳ ಸದಸ್ಯರಿಗೆ ಒತ್ತಾಯ ಪೂರ್ವಕವಾಗಿ ಯಾರಿಗೂ ಮತ ಹಾಕುವುದಿಲ್ಲ ಎಂದು ಪ್ರಮಾಣ ಮಾಡಿದರೆ 25 ಸಾವಿರ ಉಡುಗೊರೆ ಕೊಡಲು ಬಿಜೆಪಿ ಆಮಿಷ ತೋರಿಸಿರುವುದಾಗಿ ಪ್ರತಿಪಕ್ಷಗಳು ಆರೋಪಿಸಿವೆ.
ಕಾಂಗ್ರೆಸ್, ಜೆಡಿಎಸ್ ಪ್ರಭಾವವಿರುವ ತಾಲೂಕಿನಲ್ಲಿ ಬಿಜೆಪಿ ಮತ ಸೆಳೆಯದಿದ್ದರೂ ಪರವಾಗಿಲ್ಲ, ಮತ ಹಾಕದಂತೆ ತಡೆಯುವ ತಂತ್ರವನ್ನು ಬಿಜೆಪಿ ವಲಯ ಅನುಸರಿಸಿದೆ ಎನ್ನಲಾಗಿದೆ.
ಚನ್ನಪಟ್ಟಣ, ಕನಕಪುರ, ಮಾಗಡಿಯಲ್ಲಿ ಜೆಡಿಎಸ್, ಕಾಂಗ್ರೆಸ್ ಹಿಡಿತವಿದೆ . ಈ ಹಿಡಿತದಲ್ಲಿರುವ ಮತದಾರರನ್ನು ಕೊಂಡುಕೊಂಡು ಮತದಾನ ಮಾಡದಂತೆ ತಡೆದರೆ ಬಿಜೆಪಿಗೆ ಲಾಭವಿದೆ ಎಂಬುದು ಬಿಜೆಪಿ ಲೆಕ್ಕಚಾರವಾಗಿದೆ. ಮತ ಹಾಕಿದರೂ ದುಡ್ಡು. ಹಾಕದಿದ್ದರೂ ದುಡ್ಡು ಒಟ್ಟಾರೆ ಈ ಪ್ರದೇಶದ ಸ್ಥಳೀಯ ಸಂಸ್ಥೆ ಸದಸ್ಯರಿಗೆ ಜಾಕ್ ಪಾಟ್!