ಕೃಷ್ಣಯ್ಯ ಶೆಟ್ಟಿ ವಿರುದ್ಧ ಸಿಬಿಐ ತನಿಖೆ ಮುಂದುವರಿಸಿ: ಹೈಕೋರ್ಟ್
ಬೆಂಗಳೂರು, ಶುಕ್ರವಾರ, 18 ಡಿಸೆಂಬರ್ 2009( 11:27 IST )
ಬ್ಯಾಂಕ್ ವಂಚನೆ ಪ್ರಕರಣದ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರನ್ನು ತನಿಖೆ ಮುಗಿಯುವರೆಗೆ ಬಂಧಿಸಬಾರದು ಎಂದು ಆದೇಶ ನೀಡಿರುವ ರಾಜ್ಯ ಹೈಕೋರ್ಟ್, ಅವರ ವಿರುದ್ಧ ಸಿಬಿಐ ತನಿಖೆ ಮುಂದುವರಿಸಲು ಗುರುವಾರ ಗ್ರೀನ್ ಸಿಗ್ನಲ್ ನೀಡಿದೆ.
ವಂಚನೆ ಪ್ರಕರಣ ಪೂರ್ಣಗೊಂಡ ಕೂಡಲೇ ವರದಿಯನ್ನು 2010ರ ಫೆ.2ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾ.ಸುಭಾಷ್ ಬಿ.ಅಡಿ ಅವರಿದ್ದ ಏಕಸದಸ್ಯಪೀಠ ಸಿಬಿಐಗೆ ಸೂಚಿಸಿದೆ.
ಕೃಷ್ಣಯ್ಯ ಶೆಟ್ಟಿ ವಿರುದ್ಧದ ತನಿಖೆಗೆ ಈ ಮೊದಲು ಹೈಕೋರ್ಟ್ ತಡೆಯಾಜ್ಞೆ ನೀಡಿರುವುದರಿಂದ ಸಿಬಿಐಗೆ ತನಿಖೆ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ತಡೆಯಾಜ್ಞೆ ತೆರವುಗೊಳಿಸಿ ಅವರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಅವಕಾಶ ನೀಡಬೇಕೆಂದು ಕೋರಿ ಸಿಬಿಐ ಸಲ್ಲಿಸಿದ್ದ ಮಧ್ಯಂತರ ಕೋರಿಕೆ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ತಡೆಯಾಜ್ಞೆ ಆದೇಶದಲ್ಲಿ ಮಾರ್ಪಾಡು ಮಾಡಿ ವಿಚಾರಣೆ ಮುಂದುವರಿಸುವಂತೆ ಸೂಚಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿಗೆ ವಂಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೃಷ್ಣಯ್ಯ ಶೆಟ್ಟಿ ವಿರುದ್ಧ ಸಿಬಿಐ ತನಿಖೆ ಆರಂಭಿಸಲಾಗಿತ್ತು. ಇದನ್ನು ಪ್ರಶ್ನಿಸಿ ಶೆಟ್ಟಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಇದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.