ಕಳೆದ ತಿಂಗಳು ಹುಮ್ನಾಬಾದ್ ಟೀಚರ್ಸ್ ಕಾಲನಿಯ ಬೀರ್ ಶೇಬಾ ಚರ್ಚಿನ ಮೇಲೆ ನಡೆದ ದಾಳಿಗೆ ಕಾರಣರು ಯಾರು ಎಂಬ ಅಂಶ ಪತ್ತೆಯಾಗಿದೆ. ಚರ್ಚ್ ದಾಳಿಯ ಸಂಚು ರೂಪಿಸಿ ಅದನ್ನು ಕಾರ್ಯಗತಗೊಳಿಸಿದ್ದ ಇದೇ ಚರ್ಚಿನ ಮಾಜಿ ಪಾದ್ರಿ ಮತ್ತು ಇತರ ಮೂವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬೀರ್ ಶೇಬಾ ಚರ್ಚ್‌ನ ಪಾಸ್ಟರ್ ಆಗಿದ್ದ ವಸಂತ ದೇವೀಂದ್ರ ಅವರನ್ನು ಕಳೆದ ಜೂ.20ರಂದು ಗುಲ್ಬರ್ಗದ ಚಿಂಚೋಳಿಯ ಬಸಂತಪುರ್‌ಗೆ ವರ್ಗಾಯಿಸಲಾಗಿತ್ತು. ಅಲ್ಲಿಗೆ ಹೋಗಲಿಚ್ಛಿಸದ ಪಾಸ್ಟರ್ ವಸಂತ ಅವರು, ಮರಳಿ ಇಲ್ಲಿಗೇ ಬರುವಂತೆ ಮಾಡುವುದಕ್ಕಾಗಿ, ಚರ್ಚ್ ಹಾನಿಗೊಳಿಸಿದರೆ ತಮಗೆ ಮರಳಿ ಕರೆ ಬರಬಹುದೆಂಬ ಉದ್ದೇಶದಿಂದ ಈ ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.
ನವೆಂಬರ್ 17ರಂದು ಹುಮ್ನಾಬಾದ್ ಚರ್ಚ್ ಮೇಲೆ ದಾಳಿ ನಡೆದಿತ್ತು. ಬಿ.ಸುನಿಲ್ ಬಾಬು ರಾವ್, ಎಸ್.ಮಲ್ಲಿಕಾರ್ಜುನ ಸ್ವಾಮಿ ಮತ್ತು ಎಸ್.ಮಂಜುನಾಥ್ ಎಂಬವರಿಗೆ ಚರ್ಚ್‌ಗೆ ಹಾನಿ ಮಾಡಲು ಹತ್ತು ಸಾವಿರ ರೂ. ಕೊಡುವ ವಾಗ್ದಾನ ನೀಡಿ, ಒಂದು ಸಾವಿರ ರೂ. ಮುಂಗಡ ಹಣವನ್ನೂ ನೀಡಿದ್ದರು ಎಂದು ದೂರಲಾಗಿದೆ. ಬಂಧಿತರಲ್ಲಿ ಈ ಮೂವರೂ ಸೇರಿದ್ದಾರೆ.
ಸ್ಥಳೀಯ ಕ್ರಿಶ್ಚಿಯನ್ ಸಮುದಾಯದಲ್ಲಿ ಆತಂಕ ಮೂಡಿಸಿದ್ದ ಈ ದಾಳಿ ಪ್ರಕರಣದಲ್ಲಿ, ಪೀಠೋಪಕರಣಗಳು, ವಿದ್ಯುತ್ ಉಪಕರಣಗಳು ಮತ್ತು ಗೋಪುರದ ಮೇಲಿದ್ದ ಶಿಲುಬೆಗೆ ಹಾನಿ ಮಾಡಲಾಗಿತ್ತು. ಕಾಂಗ್ರೆಸ್ ಮತ್ತು ಜನತಾ ದಳ (ಜಾತ್ಯತೀತ) ಕಾರ್ಯಕರ್ತರು ಕ್ರಿಶ್ಚಿಯನ್ನರ ಜೊತೆ ಸೇರಿಕೊಂಡು, ದಾಳಿಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಭಾರೀ ಪ್ರತಿಭಟನೆಯನ್ನೂ ಮಾಡಿದ್ದವು.