ಏನೇ ಆದರೂ ಮತ್ತೊಮ್ಮೆ 'ಆಪರೇಷನ್ ಕಮಲ ನಡೆಸುವುದಿಲ್ಲ'. ಇದೆಲ್ಲ ಪ್ರತಿಪಕ್ಷಗಳ ಸುಳ್ಳು ವದಂತಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಪ್ರತಿಕ್ರಿಯಿಸಿದ್ದಾರೆ.
ಸರ್ಕಾರ ಅಸ್ತಿತ್ವಕ್ಕೆ ಬಂದ ಆರಂಭದಲ್ಲಿ ಬಹುಮತದ ಸೂಕ್ಷ್ಮ ಸ್ಥಿತಿ ಇತ್ತು. ಇದನ್ನು ದುರುಪಯೋಗಪಡಿಸಿಕೊಂಡು ಪ್ರತಿ ಪಕ್ಷಗಳು ಸರ್ಕಾರವನ್ನು ಉರುಳಿಸುವ ಸಂಚು ರೂಪಿಸಿದ್ದವು. ಆ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಸದಸ್ಯರನ್ನು ಆಪರೇಷನ್ ಕಮಲದ ಮೂಲಕ ಸೆಳೆದಿದ್ದು ನಿಜ. ಆದರೆ ಬಿಜೆಪಿಗೆ ಈಗ ಅದರ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿರುವುದು ನಿಜ. ಅತೃಪ್ತ ಶಾಸಕರ ಜೊತೆ ಮಾತುಕತೆ ನಡೆದಿದೆ. ಸಮಸ್ಯೆಗಳನ್ನು ಪರಿಹರಿಸಿಕೊಂಡು ಮುಂದೆ ಹೋಗುತ್ತೇವೆ. ನಮ್ಮ ಪಕ್ಷದ ಶಾಸಕರು ಊಟಕ್ಕೆ ಸೇರಿದರೂ ಅದಕ್ಕೆ ಬಣ್ಣ ಹಚ್ಚುತ್ತಾರೆ. ಆದರೆ ಪಕ್ಷದ ಪ್ರತಿಯೊಬ್ಬ ಶಾಸಕರೂ ಒಂದಾಗಿದ್ದಾರೆ ಎಂದರು.
ಸಣ್ಣಪುಟ್ಟ ಅಸಮಾಧಾನಗಳನ್ನು ಖಂಡಿತ ಬಗೆಹರಿಸಿಕೊಳ್ಳುತ್ತೇವೆ. ಐದು ವರ್ಷಗಳ ಕಾಲ ಸರ್ಕಾರ ಸ್ಥಿರವಾಗಿ ನಡೆಯುತ್ತದೆ. ಯಾವುದೇ ಕಾರಣಕ್ಕೂ ಮತ್ತೊಮ್ಮೆ ಆಪರೇಷನ್ ಕಮಲದ ಅಗತ್ಯ ಉಂಟಾಗುವುದಿಲ್ಲ ಎಂದರು.