ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಭಿನ್ನಮತೀಯ ಶಾಸಕರ ನಡುವೆ ಭಾನುವಾರ ನಡೆಯಲಿರುವ ಸಭೆ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
ಭಿನ್ನಮತೀಯರ ಪೈಕಿ ಮೂರು ಮಂದಿಯನ್ನು ಸಚಿವರನ್ನಾಗಿ ನೇಮಿಸಿ 7-8ಮಂದಿಗೆ ಪ್ರಮುಖ ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಿ ಒಂದಿಬ್ಬರು ಸಚಿವರಿಗೆ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿ ನೀಡಬೇಕೆಂಬ ಆಗ್ರಹವನ್ನು ಭಿನ್ನರು ಮುಖ್ಯಮಂತ್ರಿಯವರ ಮುಂದಿಟ್ಟಿದ್ದಾರೆ.
ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸದ್ಯದ ಪರಿಸ್ಥಿತಿಯಲ್ಲಿ ಒಬ್ಬರನ್ನು ಸಚಿವರನ್ನಾಗಿ ನೇಮಿಸಿ ಉಳಿದ ಕೆಲವರಿಗೆ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಿಸಲು ಒಪ್ಪಿಗೆ ನೀಡಿದ್ದಾರೆ. ಆದರೆ ಇದನ್ನೊಪ್ಪದ ಭಿನ್ನಮತೀಯರು ಯಾವುದೇ ಕಾರಣಕ್ಕೂ ತಡಮಾಡದೆ ಸಚಿವ ಸಂಪುಟ ಪುನಾರಚಿಸಿ ಕೆಲವರನ್ನು ಕೈಬಿಟ್ಟು ಭಿನ್ನರಿಗೆ ಸಂಪುಟದಲ್ಲಿ ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಇದರಿಂದಾಗಿ ನಾಳೆ ನಡೆಯಲಿರುವ ಸಂಧಾನ ಸಭೆ ರಾಜಕೀಯ ಮಹತ್ವ ಪಡೆದುಕೊಂಡಿದೆ. ನಾಳೆ ನಡೆಯಲಿರುವ ಸಭೆಯಲ್ಲಿ ಸಿಹಿಸುದ್ದಿ ನೀಡಿದರೆ ಮಾತ್ರ ಯಡಿಯೂರಪ್ಪ ಅವರೊಂದಿಗೆ ಕೈಜೋಡಿಸಿ ಸಹಕಾರ ನೀಡುವುದಾಗಿ ಭಿನ್ನಮತೀಯ ಶಾಸಕರು ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ.
ಯಡಿಯೂರಪ್ಪ ಅವರಿಂದ ಸಿಹಿ ಸುದ್ದಿ ದೊರೆಯದಿದ್ದರೆ, ನಮ್ಮದೇ ಆದ ರಾಜಕೀಯ ದಾರಿಯನ್ನು ತುಳಿಯಬೇಕಾದಿತು ಸಂದೇಶವನ್ನೂ ಹೊನ್ನಾಳಿ ಶಾಸಕ ರೇಣುಕಾಚಾರ್ಯ ನೇತೃತ್ವದ ಭಿನ್ನರ ಬಣ ಸಂದೇಶ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.