ಬಿಜೆಪಿ ಸರ್ಕಾರವನ್ನು ಉರುಳಿಸಿ ಹೊಸ ರಾಜಕೀಯ ಬೆಳವಣಿಗೆ ಸೃಷ್ಟಿಸಲು ಜೆಡಿಎಸ್ ನಡೆಸಿರುವ ಪ್ರಯತ್ನಕ್ಕೆ ತಾನು ಕೈಜೋಡಿಸದಿರಲು ಕಾಂಗ್ರೆಸ್ ನಿರ್ಧರಿಸಿದೆ.
ಕಾಂಗ್ರೆಸ್- ಜೆಡಿಎಸ್ ಸರ್ಕಾರ ರಚನೆ ಸಂಬಂಧ ಜೆಡಿಎಸ್ ನಾಯಕರು ಈಗಾಗಲೇ ತೆರೆಮರೆಯಲ್ಲಿ ನಡೆಸಿರುವ ಪ್ರಯತ್ನ ಸಂಬಂಧ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆಸಿದ ಸಭೆಯಲ್ಲಿ ಕಾಂಗ್ರೆಸ್ ಕೈ ಜೋಡಿಸದಿರುವ ನಿರ್ಧಾರ ಕೈಗೊಂಡಿದೆ.
ಆದರೆ ಹೊಸ ರಾಜಕೀಯ ಪರಿಸ್ಥಿತಿ ನಿರ್ಮಾಣವಾದರೆ, ಅಂಥ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ನಡೆಸುವ ನಿರ್ಧಾರವನ್ನು ಹೈಕಮಾಂಡ್‌ಗೆ ಬಿಡುವ ನಿರ್ಧಾರವನ್ನು ಸಭೆ ಕೈಗೊಂಡಿದೆ. ಜೊತೆಗೆ ಜೆಡಿಎಸ್ ಜೊತೆ ಕೈಜೋಡಿಸುವ ಸಂಬಂಧ ಯಾವ ಕಾಂಗ್ರೆಸಿಗರೂ ನೇರವಾಗಿ ಮಾಧ್ಯಮಗಳ ಜೊತೆಗೆ ಹೇಳಿಕೆಗಳನ್ನು ನೀಡಬಾರದು ಎಂದು ಸ್ಪಷ್ಟವಾದ ನಿರ್ದೇಶನವನ್ನೂ ನೀಡಲಾಗಿದೆ.
ಇದೇ ಸಂದರ್ಭ ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಿದ್ಧರಾಮಯ್ಯ, ಬಿಜೆಪಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಈವರೆಗೆ ಕಾಂಗ್ರೆಸ್ ಮಾಡಿಲ್ಲ, ಮುಂದೆ ಮಾಡುವುದೂ ಇಲ್ಲ. ಅಲ್ಲದೆ, ಪರ್ಯಾಯ ಸರ್ಕಾರ ನಡೆಸುವ ಸಂಬಂಧ ಜೆಡಿಎಸ್ ಜೊತೆ ಯಾವುದೇ ಚರ್ಚೆಯನ್ನೂ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.