ಶನಿವಾರ ರಾತ್ರಿ ಕೋರಮಂಗಲದ ಬಳಿಯಿಂದ ಅಪಹರಣಕ್ಕೀಡಾದ 12 ಮಂದಿ ಬಾರ್ ಗರ್ಲ್‌ಗಳನ್ನು ಪೊಲೀಸರು ಭಾನವಾರ ಬೆಳಗ್ಗೆ ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಲೂರು ಬಳಿ ದುಷ್ಕರ್ಮಿಗಳ ಜಾಡು ಹಿಡಿದು ಹೊರಟ ಪೊಲೀಸರು ಝೆನ್ ಕಾರೊಂದರಲ್ಲಿ ಕೂತಿದ್ದ ದುಷ್ಕರ್ಮಿಗಳನ್ನು ಪತ್ತೆಹಚ್ಚಿದ್ದಾರೆ. ಈ ಸಂದರ್ಭ ಪೊಲೀಸರು ಹಾಗೂ ದುಷ್ಕರ್ಮಿಗಳ ನಡುವೆ ಗುಂಡಿನ ಕಾಳಗ ನಡೆದಿದ್ದು, ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಸುದೀರ್ಘ ಕಾರ್ಯಾಚರಣೆಯ ನಂತರ ಮೂವರು ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ದುಷ್ಕರ್ಮಿಗಳನ್ನು ವಾಸಿಂ ಖಾನ್, ಸಯ್ಯದ್ ಪಾಶಾ ಹಾಗೂ ಹಿದಾಯತ್ ಎಂದು ಗುರುತಿಸಲಾಗಿದ್ದು, ಇವರಲ್ಲಿ ವಾಸಿಂ ಖಾನ್ ಈ ಹಿಂದೆ ಹತನಾಗಿದ್ದ ಪಾತಕಿ ನಸ್ರು ಸಹೋದರನಾಗಿದ್ದಾನೆ.
ಕೋರಮಂಗಲ ಬಳಿ 12 ಮಂದಿ ಬಾರ್ ಗರ್ಲ್‌ಗಳನ್ನು ಶನಿವಾರ ರಾತ್ರಿ ಅಪಹರಿಸಲಾಗಿತ್ತು. ಈ ಹಿನ್ನಲೆಯಲ್ಲಿ ಈ ಹುಡುಗಿಯರ ಕೇರ್ ಟೇಕರ್ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ನಾಲ್ಕು ತಂಡಗಳನ್ನು ರಚಿಸಿದ ಪೊಲೀಸರು ಬಾಗಲೂರು ಬಳಿ ಇಂದು ಬೆಳಗ್ಗೆ ಮೂವರು ಅಪಹರಣಕಾರರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಗುಂಡಿನ ಕಾಳಗದ ವೇಳೆಯಲ್ಲಿ ಅಪಹರಣಕಾರರಿಗೂ ಭಾರೀ ಗಾಯಗಳಾಗಿದ್ದು ಅವರನ್ನು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ, ಅಪಹರಣಕ್ಕೀಡಾದ 12 ಮಂದಿ ಬಾರ್ ಗರ್ಲ್‌ಗಳಿಗೆ ಯಾವುದೇ ಅಪಾಯವಿಲ್ಲದಂತೆ ಅವರನ್ನು ಸುರಕ್ಷಿತವಾಗಿ ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ.