ಒಂದೆಡೆ ಮದುವೆ ದಿನವೇ ವಧುವಿಗೆ ಮದುಮಗ ಕೈಕೊಟ್ಟು ಹೋಗಿದ್ದರೆ, ಮತ್ತೊಂದೆಡೆ ಮದುವೆ ಮನೆಯಲ್ಲೇ ವಧುವಿನ ಸೋದರ ಮಾವ ಕೈಹಿಡಿಯುವ ಮೂಲಕ ಹೊಸಬಾಳನ್ನು ಕೊಟ್ಟ ಸಿನಿಮೀಯ ಘಟನೆ ಶುಕ್ರವಾರ ಹಾವೇರಿಯಲ್ಲಿ ನಡೆದಿದೆ.
ಘಟನೆಯ ವಿವರ: ಹಿಜಾರಿ ಲಕ್ಮಾಪುರದ ಶೇಖಪ್ಪ ದಂಪತಿಗಳ ಪುತ್ರಿ 'ಇಂದು' ಹಾಗೂ ಶಿಕ್ಷಕ ರವಿಗೂ ಮದುವೆ ಎಂದು ನಿಶ್ಚಯಿಸಲಾಗಿತ್ತು. ಕೊಡು-ಕೊಳ್ಳುವಿಕೆಯ ವ್ಯವಹಾರವೂ ನಡೆದಿತ್ತು. ಆದರೆ ವರಮಹಾಶಯ ತನಗೆ ಈ ಮದುವೆ ಇಷ್ಟವಿಲ್ಲ, ಹೆಚ್ಚಿನ ವರದಕ್ಷಿಣೆ ನೀಡಿ ಎಂದು ತಕರಾರು ತೆಗೆದು ಗುರುವಾರ ಸಂಜೆಯೇ ಮದುವೆ ಮಂಟಪದಿಂದಲೇ ವರ ನಾಪತ್ತೆಯಾಗಿದ್ದ.
ಇತ್ತ ಯುವತಿಯನ್ನು ಶುಕ್ರವಾರ ಬೆಳಿಗ್ಗೆ ಮದುವೆ ಮಂಟಪಕ್ಕೆ ಕರೆತರಲಾಗಿತ್ತು. ವಧು ಆತಂಕದಲ್ಲಿ ಗರಬಡಿದಂತೆ ನಿಂತಿದ್ದರೆ, ವರ ಹೇಳದೆ ಕೇಳದೆ ನಾಪತ್ತೆಯಾಗಿದ್ದ. ಆದರೆ ಈ ಸಂದರ್ಭದಲ್ಲಿ ದೊಡ್ಡ ಮನಸ್ಸು ಮಾಡಿದಾತ ಬಿಎ ವಿದ್ಯಾರ್ಥಿಯಾಗಿರುವ ಸೋದರ ಮಾವ ವೆಂಕಟೇಶ್ ಇಂದು ಕೈಹಿಡಿಯಲು ಮುಂದಾಗಿದ್ದ. ಎಲ್ಲರೂ ನಿಗದಿತ ಮುಹೂರ್ತದಲ್ಲೇ ಹಸೆಮಣೆ ಏರಿದರು.
ಬಾಳು ಕೊಡಲು ಪರೀಕ್ಷೆ ಕೈಬಿಟ್ಟ ಮಾವ: ಇಂದು ಸೋದರ ಮಾವ ವೆಂಕಟೇಶ್ ಬಿಎ ಪರೀಕ್ಷೆ ಬರೆಯಲು ತೆರಳಬೇಕಾಗಿತ್ತು. ಯಾವಾಗ ಇಂದುಗೆ ಈ ರೀತಿ ಅನ್ಯಾಯವಾಗಿದೆ ಎಂದು ತಿಳಿಯಿತೋ, ಪರೀಕ್ಷೆಗೆ ಹೋಗುವುದನ್ನು ಬಿಟ್ಟು ಮದುವೆ ಮಂಟಪಕ್ಕೆ ಬಂದಿದ್ದ. ಎಲ್ಲರೂ ದುಗುಡದಲ್ಲಿದ್ದಾಗಲೇ, ತಾನು ಪರೀಕ್ಷೆಯನ್ನು ಮುಂದಿನ ವರ್ಷ ಬರೆಯುತ್ತೇನೆ, ಮೊದಲು ಮುಹೂರ್ತದಲ್ಲಿ ಮದುವೆ ನಡೆಯಲಿ, ಅದಕ್ಕೆ ತಾನೇ ಹಸೆಮಣೆ ಏರುತ್ತೇನೆ ಎಂದು ಹೇಳಿ ಎಲ್ಲರ ಆತಂಕವನ್ನು ದೂರ ಮಾಡಿದ್ದ.
ವರದಕ್ಷಿಣೆ ಕಡಿಮೆಯಾಯಿತೆಂದು ಪರಾರಿ: ಮದುವೆ ಮಾತುಕತೆ ಸಂದರ್ಭದಲ್ಲಿ ತನಗೆ ಕೊಟ್ಟ ವರದಕ್ಷಿಣೆ ಕಡಿಮೆಯಾಯಿತು ಎಂದು ವರ, ಶಿಕ್ಷಕ ರವಿ ನಾಪತ್ತೆಯಾಗಿದ್ದಾನೆ ಎಂದು ಹೇಳಲಾಗಿದೆ. ವರೋಪಚಾರದ ಸಂದರ್ಭದಲ್ಲಿ ವರದಕ್ಷಿಣೆ ನೀಡಲಾಗಿತ್ತಾದರೂ ಕೂಡ, ತನಗೆ ಮತ್ತಷ್ಟು ಹಣ ಬೇಕೆಂದು ಒತ್ತಾಯಿಸಿದ್ದನಂತೆ, ಆ ಹಣವನ್ನು ಹುಡುಗಿ ಮನೆಯವರು ಕೊಡಲು ಒಪ್ಪದಿದ್ದ ಸಂದರ್ಭದಲ್ಲಿ ವರ ಮದುವೆ ಮಂಟಪದಿಂದಲೇ ಕಾಲ್ಕಿತ್ತಿದ್ದ. ಇದೀಗ ಹಾವೇರಿ ಠಾಣೆಯಲ್ಲಿ ಕೈಕೊಟ್ಟ ವರ ರವಿ ಹಾಗೂ ಆತನ ತಾಯಿ ಜಯಲಕ್ಷ್ಮಿ ವಿರುದ್ಧ ಇಂದು ಮನೆಯವರು ದೂರು ದಾಖಲಿಸಿದ್ದಾರೆ.