ಮದುವೆಯ ಕನಸು, ತಂದೆ-ತಾಯಿ ನೋಡುವ ತವಕ, ಪತ್ನಿ, ಮಕ್ಕಳನ್ನು ನೋಡುವ ಕಾತುರದಿಂದ ಇದ್ದ ಪ್ರಯಾಣಿಕರು, ಇನ್ನೇನು ವಿಮಾದಿಂದ ಇಳಿದು ಮನೆಯತ್ತ ಹೆಜ್ಜೆ ಹಾಕಬೇಕು ಎಂದು ಕಣ್ಣು ಬಿಡುವಷ್ಟರಲ್ಲಿಯೇ, ವಿಧಿಯ ಕ್ರೂರ ಅಟ್ಟಹಾಸದಿಂದ ವಿಮಾನ ಲ್ಯಾಂಡ್ ಆಗುವ ಮುನ್ನವೇ ಟೈರ್ ಸ್ಫೋಟಿಸಿ ಸುಟ್ಟು ಭಸ್ಮವಾಗಿತ್ತು. ಇದರೊಂದಿಗೆ ಕನಸು ಹೊತ್ತ 158 ಮಂದಿ ಬಲಿಯಾಗಿದ್ದರು.
ಈ ಸಾವು ನ್ಯಾಯವೇ: ಈ ದುರ್ಘಟನೆಯಲ್ಲಿ ಕುಂದಾಪುರ ಸಮೀಪದ ಬ್ರಹ್ಮಾವರದ ಯುವಕನೊಬ್ಬ ಸಾವಿಗೀಡಾಗಿದ್ದು, ಆತನ ವಿವಾಹ ಮುಂಬರುವ ಜೂನ್ 2ಕ್ಕೆ ನಿಗದಿಯಾಗಿತ್ತು ಎಂದು ಹೇಳಲಾಗಿದೆ. ಅದೇ ರೀತಿ ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ನಾವುಂದದ ಒಂದೇ ಕುಟುಂಬದ ಆರು ಮಂದಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಅಲ್ಲದೇ ನಾಲ್ಕು ಪುಟ್ಟ ಹಸುಳೆ ಸೇರಿದಂತೆ 24 ಮಕ್ಕಳು ಸಾವನ್ನಪ್ಪಿವೆ. ಭವಿಷ್ಯದಲ್ಲಿ ಅರಳುವ ಮುನ್ನವೇ ಈ ಮುಗ್ದ ಕಂದಮ್ಮಗಳು ಅಸುನೀಗಿವೆ. ಹೀಗೆ ಹಲವಾರು ಕನಸು ಹೊತ್ತು ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಗೆ ಅರಿವಿಲ್ಲದಂತೆಯೇ ಸಾವು ಸಿಡಿಲಿನಂತೆ ಬಂದೆರಗಿತ್ತು.
ಅಮ್ಮನ ಶವ ನೋಡಲು ಬಂದ ಮಗ ಮತ್ತು ಕುಟುಂಬವೇ ಶವವಾಯಿತು: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮಡಿದವರ ಒಂದೊಂದೇ ಹೃದಯವಿದ್ರಾವಕ ಘಟನೆ ಹೊರಬೀಳುತ್ತಿದೆ. ಉಡುಪಿಯ ಅಲೀಮಾ ಎಂಬುವರು ಶುಕ್ರವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಹಾಗಾಗಿ ದುಬೈನಲ್ಲಿದ್ದ ಮಗ ಮೊಹಮ್ಮದ್ ಜಿಯಾದ್, ಶಮೀನಾ ಹಾಗೂ ಇಬ್ಬರು ಮಕ್ಕಳು ಅಲ್ಲಿಂದ ಹೊರಟು ಈ ನತದೃಷ್ಟ ಏರ್ ಇಂಡಿಯಾ ವಿಮಾನ ಹತ್ತಿದ್ದರು. ಒಟ್ಟು ಹತ್ತು ಮಂದಿ ಊರಿಗೆ ಬರುವುದಾಗಿ ತಿಳಿಸಿದ್ದರು. ಆದರೆ ಆರು ಮಂದಿಗೆ ಟಿಕೆಟ್ ಸಿಗದಿದ್ದಾಗ, ನಾಲ್ಕು ಮಂದಿ ಊರಿಗೆ ಹೊರಟಿದ್ದರು. ಅಲ್ಲದೇ ನಿನ್ನೆ ರಾತ್ರಿ ಮಾತನಾಡಿ, ತಾನು ಶನಿವಾರ ಬೆಳಿಗ್ಗೆ ಮನೆಗೆ ಬಂದು ಅಮ್ಮನ ಶವ ಸಂಸ್ಕಾರ ನೆರವೇರಿಸುವುದಾಗಿಯೂ ಸಂಬಂಧಿಗಳಲ್ಲಿ ದೂರವಾಣಿ ಮೂಲಕ ಮಾತನಾಡಿದ್ದರು. ಆದರೆ ವಿಪರ್ಯಾಸ ಎಂಬಂತೆ ವಿಮಾನ ದುರಂತದಲ್ಲಿ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. ಅಮ್ಮನ ಶವ ಸಂಸ್ಕಾರಕ್ಕೆ ಬಂದ ಮಗ ಹಾಗೂ ಕುಟುಂಬವೇ ಈಗ ಶವವಾಗಿ ಹೋಗಿದ್ದಾರೆ.
ಮಂಗಳೂರಿನ 3 ಕುಟುಂಬದ 27 ಮಂದಿ ಬಲಿ: ಬಜಪೆ ಸಮೀಪದ ಪೆರ್ಮುದೆ ಗ್ರಾಮದ ಒಂದೇ ಕುಟುಂಬದ 18 ಮಂದಿ ಹಾಗೂ ಎಡಪದವು ಗ್ರಾಮದ ಒಂದೇ ಕುಟುಂಬದ 6 ಮಂದಿ ವಿಮಾನ ದುರಂತದಲ್ಲಿ ಬಲಿಯಾಗಿದ್ದಾರೆ. ಮಂಗಳೂರು ನಗರ ಕೊಟ್ಟಾರ ಕ್ರಾಸ್‌ನ ಪೂಂಜಾ ಟೈಲರ್ಸ್‌ನ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ.
ಮಡಿಕೇರಿಯ ಮೂವರ ದುರ್ಮರಣ: ಘಟನೆಯಲ್ಲಿ ಮಡಿಕೇರಿಯ ನಿವಾಸಿಗಳಾದ ಜಯರಾಮ್ ಕೋಟ್ಯಾನ್, ಪತ್ನಿ ಚಿತ್ರಾ ಜಯರಾಮ್ ಹಾಗೂ ಪುತ್ರ ರಾಹುಲ್ ಜಯರಾಮ್ ಸಾವಿಗೀಡಾಗಿದ್ದಾರೆ ಎಂದು ಕುಟಂಬದ ಮೂಲಗಳು ತಿಳಿಸಿವೆ.
ಶವದ ಗುರುತು ಪತ್ತೆ ಹಚ್ಚಲು ಪರದಾಟ: ಟಯರ್ ಸ್ಫೋಟದಿಂದ ವಿಮಾನ ಛಿದ್ರವಾಗಿದ್ದರೆ, ವಿಮಾನಕ್ಕೆ ಹೊತ್ತಿಕೊಂಡ ಬೆಂಕಿಯಲ್ಲಿ 158 ಮಂದಿ ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಮೃತದೇಹಗಳನ್ನು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ. ಆಸ್ಪತ್ರೆಯ ಶವಾಗಾರದ ಮುಂದೆ ಮೃತರ ಸಂಬಂಧಿಗಳ ಗೋಳಾಟ ಮುಗಿಲು ಮುಟ್ಟಿದೆ. ಯಾರ ಮೃತದೇಹ ಎಂಬುದನ್ನು ಗುರುತಿಸಲು ಸಾಧ್ಯವಾಗದೆ ಸಂಬಂಧಿಕರು ಪರದಾಡುತ್ತಿದ್ದಾರೆ. ಆದರೂ 35 ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಆಸ್ಪತ್ರೆಯ ಶವಾಗಾರದ ಮುಂದೆ ನೂಗುನುಗ್ಗಲು, ಶವಗಳ ಗುರುತು ಪತ್ತೆ ಹಚ್ಚಲು ಮನೆಯವರ ಪರದಾಟ, ತನ್ನ ಮಗನ ಶವ ಎಲ್ಲಿ, ತನ್ನ ಗಂಡನ ಶವ ಎಲ್ಲಿ...ಹೀಗೆ ಗೋಳಾಡುತ್ತ ಹುಡುಕುತ್ತಿರುವ ದೃಶ್ಯ ಮನಕಲಕುವಂತಿತ್ತು.
ವಿಮಾನವೇರದ ಒಂಬತ್ತು ಮಂದಿ ಅದೃಷ್ಟವಂತರು: ಆಯುಸ್ಸು ಗಟ್ಟಿ ಇದ್ದರೆ ಮನುಷ್ಯ ಬದುಕುಳಿಯುತ್ತಾನೆ ಎಂಬುದಕ್ಕೆ ಸಾಕ್ಷಿ ಎಂಬಂತೆ ಈ ಒಂಬತ್ತು ಮಂದಿಯೇ ಸಾಕ್ಷಿ. ಮೆರ್ವಿನ್ ಡಿಸೋಜ, ವಸಂತ ಶೆಟ್ಟಿ, ತ್ರೇಸಿಯಮ್ಮ ಫಿಲಿಪ್ , ಮೊಹಮದ್ ಅಶ್ಫಾಕ್ ಹುಸ್ನಾ ಫರ್ಹೀನ್ ,ಸಂಜೀವ ಬಾಬಣ್ಣ ಹೆಗ್ಡೆ, ಲೂಯಿಸ್ ಕಾರ್ಲೋ ವಿನ್ಸೆಂಡ್ ಗೆರಾರ್ಲೋ, ಸ್ಟೀವನ್ ರೇಗೋ ಕುಞ್ಞಿಕಣ್ಣನ್ ಚಂದು ಇವರು ಟಿಕೆಟ್ ಮಾಡಿದ್ದರೂ ಕೂಡ ವಿಮಾನದಲ್ಲಿ ಪ್ರಯಾಣಿಸದೆ ಸಾವಿನ ಕುಣಿಕೆಯಿಂದ ಪಾರಾಗಿದ್ದಾರೆ.
ನಾನು ನಿಜಕ್ಕೂ ಅದೃಷ್ಟವಂತ-ವಸಂತ ಶೆಟ್ಟಿ: ನನಗೆ ಕೆಲಸದ ಒತ್ತಡ ತುಂಬಾ ಇದ್ದಿದ್ದರಿಂದ ನಾನು ಟಿಕೆಟ್ ಗಮನಿಸಲು ಹೋಗಿಲ್ಲವಾಗಿತ್ತು. ನಿಜಕ್ಕೂ ಟಿಕೆಟ್ ನನಗೆ ಶನಿವಾರ ಎಂದೇ ಲೆಕ್ಕಚಾರ ಹಾಕಿದ್ದೆ. ಹಾಗಾಗಿ ನಾನು ಶುಕ್ರವಾರ ಏರ್ ಇಂಡಿಯಾ ವಿಮಾನ ಹತ್ತಿಲ್ಲವಾಗಿತ್ತು. ಅಬ್ಬಾ ದೇವರು ದೊಡ್ಡವನು, ನಾನು ದುರಂತದಿಂದ ಪಾರಾಗಿದ್ದೇನೆ ಎಂದು ದುಬೈ ನಿವಾಸಿ ವಸಂತ ಶೆಟ್ಟಿ ಟಿವಿ9 ಜೊತೆ ಮಾತನಾಡುತ್ತ ತಿಳಿಸಿದ್ದಾರೆ. ಆದರೂ ಘಟನೆಯಲ್ಲಿ ಮೃತಪಟ್ಟವರಿಗೆ ಸಾಂತ್ವಾನ ವ್ಯಕ್ತಪಡಿಸಿದ್ದಾರೆ.