ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ರಾಜಶೇಖರ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ಸರ್ಕಾರಿ ಹೆಲಿಕಾಫ್ಟರ್ ಸಂಪರ್ಕ ಕಡಿದುಕೊಂಡು ಒಂಬತ್ತು ಗಂಟೆಗಳೇ ಕಳೆದರೂ ಅವರು ಎಲ್ಲಿದ್ದಾರೆ ಎಂಬ ವಿಚಾರ ಇನ್ನೂಗೊತ್ತಾಗದೆ, ಆತಂಕ ಕ್ಷಣಕ್ಷಣಕ್ಕೂ ಹೆಚ್ಚಿದೆ.
ಅವರು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಬಲ್ಲಾಮುಲ ಅರಣ್ಯದಲ್ಲಿ ಇಳಿದಿರಬಹುದು ಎಂಬುದಾಗಿ ಸಂಶಯಿಸಲಾಗಿದೆ. ಗಾಳಿಮಳೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆ ಹಾಗೂ ಅರಣ್ಯದ ದಟ್ಟತೆಯು ಹುಡುಕಾಟಕ್ಕೆ ಅಡ್ಡಿಯಾಗಿದೆ.
ಈ ಮಧ್ಯೆ ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಅವರು ಆಹೋರಾತ್ರಿ ಹುಡುಕಾಟಕ್ಕೆ ಆದೇಶ ನೀಡಿದ್ದಾರೆ. ಐದು ಸಾವಿರ ಸಿಆರ್‌ಪಿಎಫ್ ಸಿಬ್ಬಂದಿಗಳು ಕಾಲ್ನಡಿಗೆ ಮೂಲಕ ಹುಡುಕಾಟಕ್ಕೆ ಇಳಿದಿದ್ದಾರೆ. ಬಲ್ಲಾಮುಲಾ ಕಾಡಿನ ಸುತ್ತಮುತ್ತ ಪ್ರದೇಶಗಳ ಜನತೆಯಲ್ಲಿ ಮುಖ್ಯಮಂತ್ರಿ ಹುಡುಕಾಟಕ್ಕೆ ನೆರವು ನೀಡುವಂತೆ ವಿನಂತಿಸಲಾಗಿದೆ. ಯಾರಿಗಾದರೂ ಸುಳಿವು ಸಿಕ್ಕರೂ ತಿಳಿಸುವಂತೆಯೂ ಮನವಿ ಮಾಡಲಾಗಿದೆ.
ಆಂಧ್ರ ಹಣಕಾಸು ಸಚಿವ ಕೆ. ರೊಸಯ್ಯಾ ಅವರು ಕರೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ, ಮುಖ್ಯಮಂತ್ರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಫ್ಟರ್ ಚಿತ್ತೂರು ಜಿಲ್ಲೆಯ ದಂಡಾರಣ್ಯದಲ್ಲಿ ಇಳಿದಿರಬಹುದು ಎಂದು ಹೇಳಿದ್ದಾರೆ. ಚಿತ್ತೂರು-ನೆಲ್ಲೂರು ಪ್ರದೇಶದಲ್ಲಿ ನಾಪತ್ತೆಯಾಗಿರುವ ಹೆಲಿಕಾಫ್ಟರ್ ಹುಡುಕಾಟಕ್ಕಾಗಿ ಎಲ್ಲಾ ಕೇಂದ್ರ ಹಾಗೂ ರಾಜ್ಯ ಪಡೆಗಳು ಸನ್ನದ್ಧವಾಗಿದ್ದು, ಅಲ್ಲಿಗೆ ತಲುಪುವ ದಾರಿ ಹುಡುಕುತ್ತಿರುವುದಾಗಿ ಹೇಳಲಾಗಿದೆ.
ಭಾರತೀಯ ವಾಯುಪಡೆಯ ನಾಲ್ಕು ಹೆಲಿಕಾಫ್ಟರ್‌ಗಳು ಸೇರಿದಂತೆ ಒಟ್ಟು 11 ಹನ್ನೊಂದು ಹೆಲಿಕಾಫ್ಟರ್‌ಗಳು ಶೋಧಕಾರ್ಯ ನಡೆಸುತ್ತಿದ್ದು ಇದೀಗ ಕತ್ತಲು ಕವಿದ ಕಾರಣ ಹುಡುಕಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ ಹಿಂತಿರುಗಿವೆ. ಮುಖ್ಯಮಂತ್ರಿಗಳು ಪ್ರಯಾಣಿಸುತ್ತಿದ್ದ 2981 ಸಂಖ್ಯೆಯ ಹೆಲಿಕಾಫ್ಟರ್‌ನಲ್ಲಿ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಪೈಲಟ್‌ಗಳಿದ್ದರು.
ಅವರು ಹೈದರಾಬಾದಿನಿಂದ ಚಿತ್ತೂರಿಗೆ ಹೊರಟಿದ್ದ ಹೆಲಿಕಾಫ್ಟರ್ ಮುಂಜಾನೆ 9.35ರ ವೇಳೆಗೆ ಸಂಪರ್ಕ ಕಡಿದುಕೊಂಡಿದ್ದು, ಇದುವರೆಗೂ ಅವರ ಗತಿ ಏನಾಗಿದೆ ಎಂಬುದು ತಿಳಿದಿಲ್ಲ.
ಮುಖ್ಯಮಂತ್ರಿಗಳ ಮನೆಯಲ್ಲಿ ಶೋಕ ಸಂಪರ್ಕ ಕಡಿದುಕೊಂಡಿರುವ ವೈ.ಎಸ್. ರಾಜಶೇಖರ ರೆಡ್ಡಿಯವರ ಸ್ಥಿತಿ ಏನಾಗಿದೆಯೋ ಎಂಬ ಆತಂಕವು ಅವರ ಕುಟುಂಬಿಕರು ಹಾಗೂ ಸಂಬಂಧಿಗಳನ್ನು ಕಾಡುತ್ತಿದೆ. ಅವರ ಸಂಬಂಧಿಗಳೆಲ್ಲ ಮನೆಯಲ್ಲಿ ನೆರೆದಿದ್ದು ಅಲ್ಲಿ ಶೋಕ ಮಡುಗಟ್ಟಿದೆ. ಅವರ ಸಂಬಂಧಿ ಕಡಪ್ಪ ಮೇಯರ್ ಕಣ್ಣೀರು ಹರಿಸುತ್ತಾ ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ರಾಷ್ಟ್ರಾದ್ಯಂತ ಅವರ ಕ್ಷೇಮಕ್ಕಾಗಿ ಎಲ್ಲಾ ಧಾರ್ಮಿಕ ಸ್ಥಳಗಳಲ್ಲಿ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.
ಈ ಮಧ್ಯೆ ಅವರ ಪತ್ತೆಗಾಗಿ ಉಪಗ್ರಹ ಚಿತ್ರಗಳನ್ನು ತೆಗೆಯಲಾಗುತ್ತಿದೆ. ಇಸ್ರೋ ಸಹ ನಾಪತ್ತೆಯಾಗಿರುವ ಕಾಫ್ಟರ್ ಹುಡುಕಾಟಕ್ಕಿಳಿದಿದೆ. ವಾಯು ಸೇನೆಯ ಸುಕೋಯಿ ವಿಮಾನಗಳನ್ನು ಕಳುಹಿಸುವ ಪ್ರಯತ್ನ ನಡೆಯುತ್ತಿದೆ.
ರಾಜ್ಯ ಹಾಗೂ ಕೇಂದ್ರದ ಎಲ್ಲಾ ಪಡೆಗಳು ಸಾಧ್ಯವಿರುವ ಎಲ್ಲಾ ರೀತಿಯಿಂದಲೂ ಹುಡುಕಾಟ ನಡೆಸುತ್ತಿವೆ. ದಟ್ಟಾರಣ್ಯ ಹಾಗು ಕತ್ತಲು ವ್ಯಾಪಿಸಿರುವುದು ಹುಡುಕಾಟಕ್ಕೆ ಅಡ್ಡಿಯಾಗಿದೆ.
ಕೇಂದ್ರ ಕಾಂಗ್ರೆಸ್ ರೆಡ್ಡಿಯವರ ಸುರಕ್ಷತೆಗಾಗಿ ಪ್ರಾರ್ಥಿಸಲು ಕಾರ್ಯಕರ್ತರಿಗೆ ಸೂಚಿಸಿದೆ. ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಹಾಗೂ ಚಿದಂಬರಂ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಿಎಂ ನಾಪತ್ತೆಯ ಕುರಿತು ಮಾಹಿತಿ ನೀಡಿದ್ದಾರೆ.
ರೆಡ್ಡಿ ಅವರೊಂದಿಗೆ ಅವರ ವಿಷೇಷ ಕಾರ್ಯದರ್ಶಿ ಹಾಗೂ ಭದ್ರತಾ ಅಧಿಕಾರಿ ವೆಸ್ಲಿ ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದರು.
ಯಡಿಯೂರಪ್ಪ ಹಾರೈಕೆ ಚೀನಾ ಪ್ರವಾಸದಲ್ಲಿರುವ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆಂಧ್ರ ಮುಖ್ಯಮಂತ್ರಿ ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿದ್ದು, ಅವರು ಸುರಕ್ಷಿತವಾಗಿ ಹಿಂತಿರುಗಲಿ ಎಂಬುದಾಗಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ. ಅಂತೆಯೇ ಇತರ ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ನಾಯಕರು, ವಿರೋಧ ಪಕ್ಷದ ನಾಯಕರು ರೆಡ್ಡಿಯವರ ಸುರಕ್ಷೆಗಾಗಿ ಹಾರೈಸಿದ್ದಾರೆ.