ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ ಅನಿಲ ದುರಂತ; ಎಲ್ಲಾ ಎಂಟು ಮಂದಿ ತಪ್ಪಿತಸ್ಥರು (Bhopal gas tragedy | Warren Anderson | Union Carbide Corporation | UCIL)
Bookmark and Share Feedback Print
 
ಜಗತ್ತಿನ ಭೀಕರ ಕೈಗಾರಿಕಾ ದುರಂತವೆನಿಸಿದ ಭೋಪಾಲ್ ಅನಿಲ ದುರಂತಕ್ಕೆ ಸಂಬಂಧಪಟ್ಟಂತೆ ಬರೋಬ್ಬರಿ ಎರಡು ದಶಕಗಳ ನಂತರ ನ್ಯಾಯಾಲಯ ತೀರ್ಪು ನೀಡಿದ್ದು, ಎಲ್ಲಾ ಎಂಟು ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿದೆ.

1984ರ ಡಿಸೆಂಬರ್ 2-3ರ ನಡುವಿನ ರಾತ್ರಿ 'ಯೂನಿಯನ್ ಕಾರ್ಬಿಡ್' ಕಂಪನಿಯಲ್ಲಿ ಅನಿಲ ಸೋರಿಕೆಯಾಗಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ದುರ್ಘಟನೆಯ ಕಾರಣದಿಂದಾಗಿ ಕಳೆದ 26 ವರ್ಷಗಳಿಂದ ಒಟ್ಟು ಸಾವನ್ನಪ್ಪಿದವರ ಸಂಖ್ಯೆ ಸುಮಾರು 20,000.

ಯೂನಿಯನ್ ಕಾರ್ಬಿಡ್ ಕಾರ್ಪೊರೇಷನ್ ಮಾಜಿ ಅಧ್ಯಕ್ಷ, ಅಮೆರಿಕಾದ ವಾರೆನ್ ಆಂಡರ್ಸನ್ ಅವರೂ ತಪ್ಪಿತಸ್ಥರೆಂದು ಮುಖ್ಯ ನ್ಯಾಯಿಕ ದಂಡಾಧಿಕಾರಿ ಮೋಹನ್ ಪಿ. ತಿವಾರಿಯವರು ತೀರ್ಪು ನೀಡಿದ್ದಾರೆ. ಘಟನೆ ನಡೆದ ನಂತರ ಆಂಡರ್ಸನ್ ತಲೆ ಮರೆಸಿಕೊಂಡಿದ್ದಾರೆ.

23 ವರ್ಷಗಳಷ್ಟು ಸುದೀರ್ಘಾವಧಿಗಳ ಕಾಲ ನಡೆದ ಈ ಅನಿಲ ದುರಂತ ಪ್ರಕರಣದ ವಿಚಾರಣೆಯ ತೀರ್ಪನ್ನು ಇಂದು ನೀಡಲಾಗಿದೆ. ಆದರೆ ತಪ್ಪಿತಸ್ಥರಿಗೆ ನೀಡಲಾಗುವ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಇನ್ನಷ್ಟೇ ಪ್ರಕಟಿಸಬೇಕಿದೆ. ಶಿಕ್ಷೆಯ ಪ್ರಮಾಣ ಎರಡು ವರ್ಷಗಳನ್ನು ಮೀರಿರುವುದಿಲ್ಲ.

ವಿಚಾರಣೆ ಸಂದರ್ಭದಲ್ಲಿ 178 ಸಾಕ್ಷಿಗಳು ಹಾಗೂ 3008 ದಾಖಲೆಗಳನ್ನು ನ್ಯಾಯಾಲಯವು ಪರಿಶೀಲನೆ ನಡೆಸಿತ್ತು. ಈ ಹೊತ್ತಿಗೆ ಪ್ರತಿವಾದಿಗಳ ಪರವಾಗಿ ಮಂಡಿಸಲಾಗಿದ್ದ ಎಂಟು ಸಾಕ್ಷ್ಯಗಳನ್ನು ನ್ಯಾಯಾಲಯವು ಅನೂರ್ಜಿತಗೊಳಿಸಿತ್ತು.

ವಿಚಾರಣೆ ಸಂದರ್ಭದಲ್ಲಿ ಸಾವನ್ನಪ್ಪಿದ್ದ ಯೂನಿಯನ್ ಕಾರ್ಬಿಡ್ ಇಂಡಿಯಾ ಲಿಮಿಟೆಡ್‌ನ (ಯುಸಿಐಎಲ್) ಮಾಜಿ ಸಹಾಯಕ ಕಾರ್ಯ ವ್ಯವಸ್ಥಾಪಕ ಆರ್.ಬಿ. ರಾಯ್ ಚೌಧರಿಯವರು ಪ್ರಕರಣದ ಒಂಬತ್ತನೇ ಆರೋಪಿಯಾಗಿದ್ದರು.

ದುರಂತ ನಡೆದ ಸಂದರ್ಭದಲ್ಲಿನ ಯುಐಸಿಎಲ್ ಅಧ್ಯಕ್ಷ ಕೇಶಬ್ ಮಹೇಂದ್ರ, ಆಗಿನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಗೋಖಲೆ, ಆಗಿನ ಉಪಾಧ್ಯಕ್ಷ ಕಿಶೋರ್ ಕಾಂದಾರ್,ಆಗಿನ ಕಾರ್ಯ ವ್ಯವಸ್ಥಾಪಕ ಜೆ. ಮುಕುಂದ್, ಆಗಿನ ಉತ್ಪಾದನಾ ವ್ಯವಸ್ಥಾಪಕ ಎಸ್.ಪಿ. ಚೌಧರಿ, ಆಗಿನ ಸ್ಥಾವರ ಮೇಲ್ವಿಚಾರಕ ಕೆ.ವಿ. ಶೆಟ್ಟಿ ಮತ್ತು ಆಗಿನ ಯುಐಸಿಎಲ್ ಮತ್ತು ಯುಐಸಿಎಲ್ ಕಲ್ಕತ್ತಾ ಪ್ರೊಡಕ್ಷನ್ ಅಸಿಸ್ಟೆಂಟ್ ಎಸ್.ಐ. ಖುರೇಷಿ ಉಳಿದ ಆರೋಪಿಗಳಾಗಿದ್ದು, ಅವರೆಲ್ಲರೂ ತಪ್ಪಿತಸ್ಥರು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ