ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಭೋಪಾಲ್ ದುರಂತ ಅಮೆರಿಕಾ ಆರೋಪಿಗೆ ಭಾರತದ ಕೃಪೆ! (Bhopal gas tragedy | Warren Anderson | Union Carbide Corporation | UCIL)
Bookmark and Share Feedback Print
 
ಭೋಪಾಲ್ ಅನಿಲ ದುರಂತದ ಪ್ರಮುಖ ಆರೋಪಿ ಅಮೆರಿಕಾದ ವಾರೆನ್ ಆಂಡರ್ಸನ್ ದೇಶ ಬಿಟ್ಟು ಪರಾರಿಯಾಗಲು ಅವಕಾಶ ನೀಡಿದ್ದು ಸ್ವತಃ ಭಾರತದ ವಿದೇಶಾಂಗ ಇಲಾಖೆ ಎಂದು ಆಗಿನ ಸಿಬಿಐ ನಿರ್ದೇಶಕರು ಆರೋಪಿಸುವುದರೊಂದಿಗೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.

25,000ಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ 1984ರ ಭೀಕರ ಅನಿಲ ಸೋರಿಕೆ ದುರಂತದ ಸಂದರ್ಭದಲ್ಲಿ 'ಯೂನಿಯನ್ ಕಾರ್ಬಿಡ್' ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ವಾರೆನ್ ಆಂಡರ್ಸನ್ ವಿರುದ್ಧ ಕ್ರಮ ಕೈಗೊಳ್ಳದಂತೆ (ಅಮೆರಿಕಾದಿಂದ ಆರೋಪಿಯನ್ನು ಗಡೀಪಾರು ಮಾಡುವುದೂ ಸೇರಿದಂತೆ) ವಿದೇಶಾಂಗ ಸಚಿವಾಲಯವು ಸಿಬಿಐ ಮೇಲೆ ಒತ್ತಡ ಹೇರಿತ್ತು ಎಂದು ಸಿಬಿಐ ಮಾಜಿ ಜಂಟಿ ನಿರ್ದೇಶಕ ಬಿ.ಆರ್. ಲಾಲ್ ಆರೋಪಿಸಿದ್ದಾರೆ.
PR

1984ರ ಡಿಸೆಂಬರ್ 2-3ರ ನಡುವಿನ ರಾತ್ರಿ ಅನಿಲ ಸೋರಿಕೆಯಾದ ನಂತರ ವಿದೇಶಾಂಗ ಸಚಿವಾಲಯದ ಒತ್ತಡದ ಹೊರತಾಗಿಯೂ ಡಿಸೆಂಬರ್ 7ರಂದು ಭೋಪಾಲ್‌ನಲ್ಲಿ ಬಂಧಿಸಲಾಗಿತ್ತು. ಅಚ್ಚರಿಯೆಂದರೆ ಬಂಧನಕ್ಕೊಳಗಾದ ಕೆಲವೇ ಗಂಟೆಗಳಲ್ಲಿ ಆತನನ್ನು ಬಿಡುಗಡೆ ಮಾಡಲಾಗಿತ್ತು. ಅಲ್ಲದೆ ಆತ ಭಾರತ ಸರಕಾರದ ವಿಮಾನದಲ್ಲೇ ಅಮೆರಿಕಾಕ್ಕೆ ಪರಾರಿಯಾಗಿದ್ದ!

ಘಟನೆ ನಡೆದು 26 ವರ್ಷಗಳ ನಂತರ ಅಂದರೆ 23 ವರ್ಷಗಳ ಕಾಲ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯವು ನಿನ್ನೆಯಷ್ಟೇ ತೀರ್ಪು ನೀಡಿತ್ತು. ಪರಾರಿಯಾಗಿರುವ ಆರೋಪಿ ಆಂಡರ್ಸನ್ ಕುರಿತು ತೀರ್ಪಿನಲ್ಲಿ ಯಾವುದೇ ಉಲ್ಲೇಖ ಮಾಡದ ಕೋರ್ಟ್, ಉಳಿದ ಎಂಟು ಮಂದಿಗೆ ಕೇವಲ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ. ಬೆನ್ನಿಗೆ ಆರೋಪಿಗಳು ಜಾಮೀನು ಪಡೆದುಕೊಂಡಿದ್ದಾರೆ.

ಆಂಡರ್ಸನ್ ವಿರುದ್ಧ ಕ್ರಮ ಕೈಗೊಳ್ಳದಂತೆ ತನ್ನ ವಿರುದ್ಧ ಒತ್ತಡ ಹೇರಲಾಗಿತ್ತು ಎಂಬ ಸಿಬಿಐ ಮಾಜಿ ನಿರ್ದೇಶಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಕಾನೂನು ಸಚಿವ ವೀರಪ್ಪ ಮೊಯ್ಲಿ, ನಿವೃತ್ತಿಯ ನಂತರ ಯಾರು ಏನು ಬೇಕಾದರೂ ಹೇಳಿಕೆ ನೀಡುತ್ತಾರೆ; ಇದೊಂದು ಬೇಜವಾಬ್ದಾರಿಯುತ ಹೇಳಿಕೆ. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಕೆಲವರು ಹುತಾತ್ಮರಾಗಲು ಯತ್ನಿಸುತ್ತಾರೆ ಎಂದಿದ್ದಾರೆ.

ಯಾವುದೇ ಸಮಸ್ಯೆಯಾಗದು: ಅಮೆರಿಕಾ
ಭೋಪಾಲ್ ಅನಿಲ ದುರಂತ ಪ್ರಕರಣದ ತೀರ್ಪು ಭಾರತದ ಜತೆಗಿನ ಸಂಬಂಧ ಅಥವಾ ಪ್ರಸಕ್ತ ಭಾರತದ ಸಂಸತ್ತಿನ ಎದುರಿರುವ ಪರಮಾಣು ಬಾಧ್ಯತಾ ಮಸೂದೆಯ ಮೇಲೆ ಯಾವುದೇ ದುಷ್ಪರಿಣಾಮ ಬೀರದು ಎಂದು ಅಮೆರಿಕಾ ತಿಳಿಸಿದೆ.

ಅಲ್ಲದೆ ದುರಂತದ ತೀರ್ಪನ್ನು ನ್ಯಾಯಾಲಯವು ನೀಡಿರುವುದರಿಂದ ಪ್ರಕರಣ ಇಲ್ಲಿಗೆ ಮುಕ್ತಾಯವಾಗಬಹುದು ಎಂದು ನಾವು ನಂಬಿದ್ದೇವೆ. ಇದರ ಕುರಿತು ಮತ್ತಷ್ಟು ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಅಮೆರಿಕಾ ಅಧಿಕಾರಿಗಳು ಪ್ರತಿಕ್ರಿಯೆ ನೀಡಿದ್ದಾರೆ.

ಅನಿಲ ದುರಂತದಲ್ಲಿ ಬಲಿಪಶುಗಳ ಪರವಾಗಿ ತೀರ್ಪು ಬರದೇ ಇರುವುದರಿಂದ ಇದು ಪರಮಾಣು ಬಾಧ್ಯತಾ ಮಸೂದೆಯ ಮೇಲೆ ಪರಿಣಾಮ ಬೀರಲಿದೆ ಎಂಬ ವಾದವನ್ನು ತಳ್ಳಿ ಹಾಕಿರುವ ಅಮೆರಿಕಾ, ತಪ್ಪಿತಸ್ಥರಿಗೆ ಶಿಕ್ಷೆಯನ್ನು ಪ್ರಕಟಿಸಲಾಗಿದೆ; ಹಾಗಾಗಿ ಯಾವುದೇ ರೀತಿಯಲ್ಲಿ ಅಡ್ಡಿಯಾಗದು ಎಂದಿದೆ.

ಅದೇ ಹೊತ್ತಿಗೆ ಆಂಡರ್ಸನ್‌ನನ್ನು ಅಗತ್ಯ ಬಿದ್ದರೆ ಭಾರತಕ್ಕೆ ಗಡಿಪಾರು ಮಾಡಲಾಗುವುದೇ ಎಂಬ ಪ್ರಶ್ನೆಗೆ, ನ್ಯಾಯಾಲಯವು ತೀರ್ಪಿನಿಂದ ಅವರನ್ನು ಹೊರಗಿಟ್ಟಿರುವುದರಿಂದ ಆ ಪರಿಸ್ಥಿತಿ ಉದ್ಭವಿಸುವುದಿಲ್ಲ ಎಂದು ಅಮೆರಿಕಾ ಅಭಿಪ್ರಾಯಪಟ್ಟಿದೆ.

ಸರಕಾರ ಮರು ಪರಿಶೀಲಿಸಬೇಕು: ಬಿಜೆಪಿ
ಭೋಪಾಲ್ ಅನಿಲ ದುರಂತದಿಂದ ಸರಕಾರವು ಪಾಠ ಕಲಿಯಬೇಕು ಎಂದು ಹೇಳಿರುವ ಬಿಜೆಪಿ, ತಪ್ಪಿತಸ್ಥರಿಗೆ ಕೇವಲ ಎರಡು ವರ್ಷಗಳ ಶಿಕ್ಷೆ ನ್ಯಾಯಾಲಯದಿಂದ ದೊರಕಿದೆ; ಇದರಿಂದಾಗಿ ಬಲಿಪಶುಗಳು ನ್ಯಾಯದಿಂದ ವಂಚಿತರಾಗಿದ್ದಾರೆ. ಹಾಗಾಗಿ ಪರಮಾಣು ಬಾಧ್ಯತಾ ಮಸೂದೆಯ ಕುರಿತು ಸರಕಾರ ಮರು ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿದೆ.

ಪರಮಾಣು ಅವಘಢಗಳ ಸಂದರ್ಭದಲ್ಲಿ ಕೇವಲ 500 ಕೋಟಿ ರೂಪಾಯಿಗಳ ಪರಿಹಾರಕ್ಕೆ ಮಾತ್ರ ಅವಕಾಶವಿರುವ ಪರಮಾಣು ಬಾಧ್ಯತಾ ಮಸೂದೆ ಪ್ರಸಕ್ತ ಚರ್ಚೆಯಲ್ಲಿದೆ. ಹಾಗಾಗಿ ಸರಕಾರವು ಅಮೆರಿಕಾದೆದುರು ಕಾಲೂರಬಾರದು ಎಂದು ಬಿಜೆಪಿ ವಕ್ತಾರ ರವಿ ಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ