ಈಗಾಗಲೇ ರಾಜ್ಯದ ಪ್ರಯಾಣಿಕರೇ ಸೀಟಿಲ್ಲದೆ ತೊಂದರೆ ಅನುಭವಿಸುತ್ತಿರುವ ಬೆಂಗಳೂರು-ಮಂಗಳೂರು ರೈಲನ್ನು ಕೇರಳದ ಕಣ್ಣೂರುವರೆಗೆ ವಿಸ್ತರಿಸಿ, ಕೇಂದ್ರ ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಅವರು ರಾಜ್ಯದ ಪ್ರಯಾಣಿಕರಿಗೆ ಅನ್ಯಾಯ ಮಾಡಿರುವುದನ್ನು ವಿರೋಧಿಸಿ ಜುಲೈ 25ರಂದು 'ರೈಲು ತಡೆ' ಪ್ರತಿಭಟನೆ ನಡೆಸಲು ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ (ಕೆಸಿಸಿಐ) ನಿರ್ಧರಿಸಿದೆ.
ಬುಧವಾರ ಈ ಕುರಿತು ಕೆಸಿಸಿಐ ಅಧ್ಯಕ್ಷ ಶ್ರೀನಿವಾಸ್ ಕಾಮತ್ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ, ರೈಲ್ವೇ ಸಚಿವೆ ತಕ್ಷಣವೇ ಈ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಲಾಯಿತು.
ಮಂಗಳೂರು-ಬೆಂಗಳೂರು ರೈಲನ್ನು ಕಣ್ಣೂರಿಗೆ ವಿಸ್ತರಿಸುವ ಪರಿಣಾಮವಾಗಿ ಕರಾವಳಿ ಕನ್ನಡಿಗರ ಸೀಟು ಕಾದಿರಿಸುವ ಕೋಟಾವನ್ನು ಶೇ.20ಕ್ಕಿಂತಲೂ ಕೆಳಗಿಳಿಸಿದಂತಾಗುತ್ತದೆ. ಇದರಿಂದ ಕನ್ನಡಿಗರಿಗೆ, ಕರ್ನಾಟಕಕ್ಕೆ ಅನ್ಯಾಯವಾಗಿದೆ ಮತ್ತು ಮಲಯಾಳಿಗರಿಗೆ ಸಹಾಯವಾಗಿದೆ.
ರೈಲ್ವೇ ಯಾತ್ರಿ ಸಂಘ, ಮಂಗಳೂರು ರೈಲು ಸಂರಕ್ಷಣಾ ಸಮಿತಿ ಮತ್ತಿತರ ಹಲವಾರು ಸಂಘ ಸಂಸ್ಥೆಗಳು ಸಭೆಯಲ್ಲಿ ಭಾಗವಹಿಸಿದ್ದವು. ರೈಲು ತಡೆ ಕಾರ್ಯಕ್ರಮಕ್ಕೆ ಮುನ್ನ ಜುಲೈ 18ರಂದು ಮತ್ತೊಮ್ಮೆ ಈ ಕುರಿತು ಸಭೆ ನಡೆಸಲು ಕೂಡ ಸಭೆಯಲ್ಲಿ ತೀರ್ಮಾನಿಸಲಾಯಿತು. |