ಮುನಿಯನಾದ ಮಯೂರ್
ಬೆಂಗಳೂರು, ಬುಧವಾರ, 6 ಫೆಬ್ರವರಿ 2008( 14:50 IST )
ತತ್‌ಕ್ಷಣಕ್ಕೆ ಒಂದು ಯಶಸ್ವೀ ಚಿತ್ರದ ನಿರೀಕ್ಷೆಯಲ್ಲಿರುವ ಮಯೂರ್ ಪಟೇಲ್‌ಗೆ ಸಿಕ್ಕಿರುವ ಹೊಸ ಚಿತ್ರ ಮುನಿಯ. ವಿದ್ಯಾರ್ಥಿ ಎಂಬ ಚಿತ್ರ ನಿರ್ದೇಶಿಸಿದ ನಾಗಚಂದ್ರರ ಸಾರಥ್ಯದಲ್ಲಿ ಚಿತ್ರ ಮೂಡಿಬರಲಿದ್ದು ಮುನಿರಾಜು ನಿರ್ಮಾಪಕರಾಗಿದ್ದಾರೆ.
ಹಳ್ಳಿಯ ಪರಿಸರದಲ್ಲಿ ಸಾಗುವ ಕಥೆಯನ್ನು ಈ ಚಿತ್ರ ಹೊಂದಿರುವುದರಿಂದ ಐತೆ-ಪೈತೆ ಶೈಲಿಯ ಭಾಷೆಯನ್ನು ನಾಯಕ ಮಯೂರ್ ಪಟೇಲ್ ರೂಢಿಸಿಕೊಳ್ಳುತ್ತಿದ್ದಾರಂತೆ. ಜತೆಗೆ ದೇಹಭಾಷೆಯನ್ನೂ ಮೈಗೂಡಿಸಿಕೊಳ್ಳುತ್ತಿದ್ದಾರಂತೆ.
ಚಿತ್ರದ ನಾಯಕಿ ಸಾಹಿತ್ಯ. ಮುನಿಯ ಚಿತ್ರದಲ್ಲಿ ಈಕೆಯದು ಬಜಾರಿಯ ಪಾತ್ರವಂತೆ. ತಮಿಳಿನಲ್ಲಿ ಈಗಾಗಲೇ ತೋಳ ಎಂಬ ಚಿತ್ರದಲ್ಲಿ ನಟಿಸಿರುವ ಈಕೆಯ ಭವಿಷ್ಯ ಮುನಿಯ ಚಿತ್ರದ ಯಶಸ್ಸಿನ ಮೇಲೆ ನಿಂತಿದೆ ಎನ್ನಬಹುದು.
ಚಿತ್ರದ ಕಥೆಯ ಅಗತ್ಯಕ್ಕೆ ತಕ್ಕಂತೆ ಬಹುದೊಡ್ಡ ಮರದ ಮೇಲೆ ಫೈಟಿಂಗ್ ಸೀನ್ ಚಿತ್ರೀಕರಿಸಲಾಗುವುದು ಎಂದು ಮಯೂರ್ ಪಟೇಲ್ ಈ ಮಧ್ಯೆ ತಿಳಿಸಿದರು. ಒಟ್ಟಿನಲ್ಲಿ ನಾಯಕ ಮರ ಹತ್ತುತ್ತಿದ್ದಾನೆ ಅಂತಾಯ್ತು.
ನಾಯಕ ತಾನೇ? ಹತ್ತಲಿ ಬಿಡಿ. ಪ್ರೇಕ್ಷಕರನ್ನು ಮರ ಹತ್ತಿಸದಿದ್ದರೆ ಸಾಕು!!