ಗನ್ ಹೆಸರಿನ ಚಿತ್ರವೊಂದು ತೆರೆ ಮೇಲೆ ಬರುವ ದಿನ ಹತ್ತಿರವಾಗುತ್ತಿದೆ. ಹರೀಶ್ ರಾಜ್ ಹಾಗೂ ಮಲ್ಲಿಕಾ ಕಪೂರ್ ಅಭಿನಯದ ಈ ಚಿತ್ರ ಈಗಾಗಲೇ ಸೆಟ್ಟೇರಿದ್ದು, ಭರದಿಂದ ಚಿತ್ರೀಕರಣಗೊಳ್ಳುತ್ತಿದೆ.
ಬಹು ದಿನದ ನಂತರ ಮಲ್ಲಿಕಾ ಕಪೂರ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಗಂಗಾ ಕಾವೇರಿ ಹಾಗೂ ಸವಿಸವಿ ನೆನಪು ಚಿತ್ರದ ನಂತರ ಬಹುತೇಕ ಮರೆಯಾಗಿದ್ದ ಈಕೆ ಮತ್ತೊಮ್ಮೆ ಕನ್ನಡದ ಮೆಟ್ಟಿಲು ಏರುವಂತೆ ಆಗಿದೆ. ನಟ ಹರೀಶ್ ರಾಜ್ ಈ ಚಿತ್ರದ ನಿರ್ಮಾಪಕರೂ ಹೌದು. ಇವರು ಮುರುಳಿ ಜತೆ ಜಂಟಿಯಾಗಿ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿತ್ರಕಥೆಯಲ್ಲೂ ಹರೀಶ್ ಹಸ್ತ ಇದೆ. ಇಲ್ಲೂ ಇವರು ಮಂಜು ಮಾಂಢವ್ಯ ಜತೆ ಸೇರಿ ಕಥೆ ಹೆಣೆದಿದ್ದಾರೆ.
ಕಲಾಕಾರ್ ಚಿತ್ರದ ಮೂಲಕ ನಿರ್ದೇಶಕರಾಗಿ ಭಡ್ತಿ ಪಡೆದಿದ್ದ ಹರೀಶ್ ರಾಜ್‌ಗೆ ಅದು ಅಷ್ಟೊಂದು ಯಶಸ್ಸು ತಂದು ಕೊಟ್ಟಿರಲಿಲ್ಲ. ಆದರೆ ಈಗ ಇನ್ನೊಂದು ಯತ್ನಕ್ಕೆ ಕೈ ಹಾಕಿದ್ದಾರೆ. ಇದರ ಮೂಲಕ ತಾವು ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುವ ಆಶಯ ವ್ಯಕ್ತಪಡಿಸಿದ್ದಾರೆ.
ಚಿತ್ರದಲ್ಲಿ ರಾಜಕಾರಣಿ ವಾಸಿಂ ಖಾನ್ ಪಾತ್ರದಲ್ಲಿ ರಂಗಾಯಣ ರಘು ಮಿಂಚಲಿದ್ದಾರಂತೆ. ರಚನಾ ಮೌರ್ಯ ಹಾಗೂ ಸಿಮ್ರಾನ್ ಖಾನ್ ಎರಡು ಐಟಂ ಸಾಂಗಿನಲ್ಲಿ ಕಾಣಿಸಲಿದ್ದಾರಂತೆ. ರಾಷ್ಟ್ರಪ್ರಶಸ್ತಿ ವಿಜೇತ ಪಿಟೀಲು ವಾದಕ ರೋನಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. 35 ದಿನಗಳ ಅವಧಿಯಲ್ಲಿ ಚಿತ್ರದ ಚಿತ್ರೀಕರಣ ಮುಗಿದು, ಬಿಡುಗಡೆಗೆ ಸಿದ್ಧವಾಗಲಿದೆ ಎಂದು ಹೇಳಲಾಗುತ್ತಿದೆ.