'ಸೂಪರ್' ಪ್ರಚಂಡ ಜಯಭೇರಿ ಬಾರಿಸುತ್ತಿದ್ದಂತೆ ಉಪೇಂದ್ರ ಅಭಿಮಾನಿಗಳಲ್ಲಿ ಮಿಂಚಿನ ಸಂಚಾರವಾಗಿದೆ. ತಮ್ಮ ಆರಾಧ್ಯಮೂರ್ತಿ ಉಪ್ಪಿಯೊಂದಿಗೆ ಮಾತನಾಡಬೇಕೆಂಬ ಬಯಕೆಯೂ ಮಿತಿ ಮೀರಿದೆ. ಈ ಹೊತ್ತಲ್ಲಿ ಯಾರಾದರೂ ಉಪ್ಪಿಯ ಪರ್ಸನಲ್ ಮೊಬೈಲ್ ನಂಬರ್ ಕೊಟ್ಟರೆ? ನಿಮಗೂ ಬೇಕೆನಿಸಬಹುದು, ಅಲ್ಲವೇ?
ಆ ನಂಬರು 9****11111 ಇದೆಂದು ಯಾರು ಬೇಕಾದರೂ ಕೊಡಬಹುದು. ಮಾತನಾಡಲೂ ಬಹುದು. ಆದರೆ ನೆನಪಿಡಿ, ಇದು ಉಪೇಂದ್ರ ನಂಬರ್ ಅಲ್ಲ. ಈ ನಂಬರಿಗೆ ಫೋನ್ ಮಾಡಿದರೆ ಅಲ್ಲಿ ಮಾತಿಗೆ ಸಿಗುವುದು ನಿಮ್ಮ ಗುರುವಲ್ಲ. ಬದಲಿಗೆ ಪ್ರಶಾಂತ್ ಸಂಬರ್ಗಿ ಎಂಬ ಉದ್ಯಮಿ!
ವಿಷಯ ಸಿಂಪಲ್. ಎರಡು ವರ್ಷಗಳ ಹಿಂದೆ 9****11111 ನಂಬರ್ ಉಪೇಂದ್ರರಲ್ಲಿತ್ತು. ಅದನ್ನು ಮೊಬೈಲ್ ಸೇವಾದಾರ ಸಂಸ್ಥೆಯಿಂದ ಪ್ರಶಾಂತ್ ಪಡೆದುಕೊಂಡಿದ್ದರು. ಆದರೆ ಅಭಿಮಾನಿಗಳು ಮಾತ್ರ ಇದೇ ಉಪ್ಪಿಯ ನಂಬರ್ ಎಂದು ಕಾಟ ಕೊಡುತ್ತಿದ್ದಾರೆ. ಪ್ರಶಾಂತ್ ಅವರಿಗಂತೂ ಸಾಕು ಸಾಕಾಗಿ ಹೋಗಿದೆ.
ಬರೋಬ್ಬರಿ ಒಂದು ಲಕ್ಷ ರೂಪಾಯಿ ಕೊಟ್ಟು ಕೊನೆಯ ಐದು ಸಮಾನ ಸಂಖ್ಯೆಗಳುಳ್ಳ ಅಂಕಿಯ ಮೊಬೈಲ್ ನಂಬರನ್ನು (Platinum mobile number) ಪ್ರಶಾಂತ್ ಕೊಂಡು ಕೊಂಡಿದ್ದರು. ಆದರೆ ಈಗ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಸ್ಥಿತಿ ಅವರದ್ದಾಗಿದೆ. ಫೋನ್ ಸ್ವಿಚ್ ಆನ್ ಮಾಡಿದ ಕೂಡಲೇ ಉಪ್ಪಿ ಅಭಿಮಾನಿಗಳ ಕರೆ ಮತ್ತು ಸಂದೇಶಗಳು ಅವರಿಗೆ ಕಿರಿಕಿರಿ ತರಿಸುತ್ತಿವೆ.
ಈ ಬಗ್ಗೆ ಬೆಂಗಳೂರು ಮಿರರ್ ಜತೆ ತನಗಾಗುತ್ತಿರುವ ಕಿರಿಕಿರಿಯನ್ನು ಪ್ರಶಾಂತ್ ತೋಡಿಕೊಂಡಿದ್ದಾರೆ.
PR
ಕಳೆದ ಒಂದು ವರ್ಷದ ಹಿಂದೆ ನಾನು ಈ ಸಂಖ್ಯೆಯನ್ನು ದುಬಾರಿ ಹಣ ತೆತ್ತು ಖರೀದಿಸಿದ್ದೆ. ಇತ್ತೀಚಿನವರೆಗೂ ದೊಡ್ಡ ಮಟ್ಟದ ಕಿರಿಕಿರಿ ಆಗಿರಲಿಲ್ಲ. ಯಾರೋ ಕೆಲವರು ಫೋನ್ ಮಾಡುತ್ತಿದ್ದರು. ಅದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಕಳೆದೆರಡು ವಾರಗಳಿಂದ ನನಗೆ ಹಿಂಸೆಯಾಗುತ್ತಿದೆ ಎಂದಿದ್ದಾರೆ.
ಪ್ರಶಾಂತ್ ಮೊಬೈಲ್ಗೆ ಕರೆ ಮಾಡುತ್ತಿರುವುದು ಕೇವಲ ಉಪೇಂದ್ರ ಅಭಿಮಾನಿಗಳು ಮಾತ್ರವಲ್ಲ. ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಕೂಡ ಫೋನ್ ಮಾಡುತ್ತಿದ್ದಾರೆ. ತಾನು ಉಪೇಂದ್ರ ಅಲ್ಲ ಎಂದು ನಂಬಿಸುವ ಹೊತ್ತಿಗೆ ಪ್ರಶಾಂತ್ ಸುಸ್ತೋಸುಸ್ತು.
ಪ್ರತಿದಿನ ಉಪೇಂದ್ರ ಬೇಕೆಂದು ಕನಿಷ್ಠ 50 ಕರೆಗಳು ಬರುತ್ತಿವೆ. 100ಕ್ಕೂ ಹೆಚ್ಚು ಎಸ್ಎಂಎಸ್ಗಳು ಬರುತ್ತಿವೆ. ಆದರೆ ಎಸ್ಎಂಎಸ್ಗಳಿಗೆ ಯಾವುದೇ ಪ್ರತಿಕ್ರಿಯೆ ನೋಡುವ ಗೋಜಿಗೆ ಅವರು ಹೋಗುತ್ತಿಲ್ಲ.
ರಾಜಕಾರಣಿಗಳು ಕೂಡ ಉಪ್ಪಿಯ ಜತೆ ಮಾತನಾಡಲು ಕರೆ ಮಾಡುತ್ತಿದ್ದಾರೆ. ಅದೂ ಒಂದೆರಡು ಬಾರಿಯಲ್ಲ. ತಾನಲ್ಲ ಎಂದು ಹೇಳಿದರೂ ಕೇಳುತ್ತಿಲ್ಲ. ಯಾರು ಕೂಡ ಉಪೇಂದ್ರರ ಹೊಸ ನಂಬರ್ ಪಡೆದುಕೊಂಡಿಲ್ಲ ಎನ್ನುವುದು ಇದರಿಂದ ಖಚಿತವಾಗುತ್ತಿದೆ ಎನ್ನುತ್ತಾರೆ ಪ್ರಶಾಂತ್.
ಮಾಧ್ಯಮಗಳು, ಅಭಿಮಾನಿಗಳು, ರಾಜಕಾರಣಿಗಳು, ಪೊಲೀಸ್, ಹುಡುಗಿಯರು, ನಿರ್ಮಾಪಕರು.. ಹೀಗೆ ಪ್ರತಿಯೊಬ್ಬರಿಗೂ ಉತ್ತರಿಸಿ ಹೈರಾಣಾಗಿ ಹೋಗಿರುವ ಪ್ರಶಾಂತ್ ಹಣದ ಜತೆ ಆರೋಗ್ಯ ಸಮಸ್ಯೆಗೂ ಒಳಗಾಗಿದ್ದಾರೆ. ದಯವಿಟ್ಟು ಈ ನಂಬರಿಗೆ ಕರೆ ಮಾಡಬೇಡಿ. ಉಪೇಂದ್ರರ ನಂಬರ್ ಬದಲಾಗಿದೆ ಎಂದು ಜಗತ್ತಿಗೆ ಹೇಳಲು ನಾನು ಬಯಸುತ್ತಿದ್ದೇನೆ ಎಂದು ಪ್ರಶಾಂತ್ ಮನವಿ ಮಾಡಿಕೊಂಡಿದ್ದಾರೆ.
ಉಪ್ಪಿಯ ರಹಸ್ಯಗಳು ನನಗೆ ಗೊತ್ತು... ಉಪೇಂದ್ರ ತನ್ನ ಹಳೆಯ ನಂಬರನ್ನು ಸರೆಂಡರ್ ಮಾಡಿರಬಹುದು. ಆದರೆ ಅವರು ಇತರ ಸೇವೆಗಳಲ್ಲಿ ಮೊಬೈಲ್ ನಂಬರ್ ಬದಲಾವಣೆ ಮಾಡಲು ಮರೆತಿದ್ದಾರೆ.
ಉಪೇಂದ್ರ ತನ್ನ ಕ್ರೆಡಿಟ್ ಕಾರ್ಡಿನಲ್ಲಿ ಏನನ್ನು ಖರೀದಿಸಿದರೂ ನನಗೆ ಗೊತ್ತಾಗುತ್ತದೆ. ಅವರು ವಿದೇಶಗಳಲ್ಲಿ ಖರೀದಿ ಮಾಡಿದಾಗ, ಅವರು ಎಲ್ಲಿದ್ದಾರೆ ಎಂಬುದು ನನಗೆ ತಿಳಿಯುತ್ತದೆ. ಈ ಕುರಿತ ಎಲ್ಲಾ ಎಸ್ಎಂಎಂಸ್ ಸಂದೇಶಗಳು ನನಗೆ ಬರುತ್ತಿವೆ. ಬಿಲ್ ವಿವರಗಳು ಮತ್ತು ಪಾವತಿ ಅಲರ್ಟ್ಗಳು ಸೇರಿದಂತೆ ಎಲ್ಲಾ ವಿವರಗಳು ನನಗೆ ಗೊತ್ತು.
ಕೆಲವರು ತಾವು ನಿಮ್ಮ ಚಿತ್ರದಲ್ಲಿ ನಟಿಸಲು ಬಯಸುತ್ತಿದ್ದೇವೆ ಎಂದೂ, ಇನ್ನು ಕೆಲವರು ಶುಭ ಹಾರೈಸುತ್ತಿದ್ದೇವೆ ಎಂದೂ ಸಾಕಷ್ಟು ನಟರು ಸಂದೇಶ ಕಳುಹಿಸುತ್ತಿದ್ದಾರೆ. ಇದರಿಂದಾಗಿ ಚಿತ್ರರಂಗದ ಸಾಕಷ್ಟು ಗಣ್ಯರ ನಂಬರುಗಳು ನನಗೆ ತಿಳಿದು ಹೋಗಿದೆ. ಅಲ್ಲದೆ ಇವರೆಲ್ಲ ಕಳೆದ ಎರಡು ವರ್ಷಗಳಿಂದ ಉಪೇಂದ್ರ ಜತೆ ಮಾತನಾಡಿರಲಿಲ್ಲ ಎನ್ನುವುದು ಕೂಡ ನನಗೆ ಗೊತ್ತಾಗಿದೆ ಎಂದು ಪ್ರಶಾಂತ್ ಹೇಳಿಕೊಂಡಿದ್ದಾರೆ.