ಆಕಾಶ್ ಆಡಿಯೋ ಎಂದರೆ ಎಲ್ಲರಿಗೂ ನೆನಪಾಗೋದು ಮಧು ಬಂಗಾರಪ್ಪ. ಆದರೆ ಇನ್ಮುಂದೆ ಆಡಿಯೋ ಮಧು ಬಂಗಾರಪ್ಪ, ನಟ ಮಧು ಬಂಗಾರಪ್ಪ ಆಗಲಿದ್ದಾರೆ. ಆಕಾಶ್ ಆಡಿಯೋ, ರೆಕಾರ್ಡಿಂಗ್ ಸ್ಟುಡಿಯೋ, ಸಂಕಲನ ಕೇಂದ್ರಗಳನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗುತ್ತಿರುವ ಮಧು, ಬೆಳ್ಳಿತೆರೆ ಮೇಲೂ ಮಿಂಚುತ್ತಾರಾ?
'ನಾನು ಕಲಾವಿದನಲ್ಲ' ಎಂದು ಅವರು ಹೇಳಿರುವ ಮಾತು ಗಾಂಧಿನಗರದಲ್ಲಿ ಸುತ್ತುತ್ತಿದೆ. ಆದರೂ ನೀನು ಕಲಾವಿದನಾಗು ಎಂದು ಹಿತೈಷಿಗಳು ಬಹಳ ವರ್ಷಗಳಿಂದ ಹೇಳುತ್ತಾ ಬಂದಿದ್ದನ್ನು ಈಗ ಗಂಭೀರವಾಗಿ ಯೋಚಿಸಿದ್ದಾರೆ. ಈಗ ಸಮಯ ಕೂಡಿಬಂದಿದೆ ಎನ್ನುತ್ತಾರೆ.
ಮಧು ಬಂಗಾರಪ್ಪ ನಾಯಕನಾಗಿ, ನಿರ್ಮಿಸುತ್ತಿರುವ ಚಿತ್ರದ ಹೆಸರು 'ದೇವಿ'. ಈ ಟೈಟಲ್ ಅನ್ನು ರಮೇಶ್ ಯಾದವ್ ರಿಜಿಸ್ಟರ್ ಮಾಡಿಸಿದ್ದರು. ಮಧು ಅವರು ಕೇಳಿದಾಗ ಮರುಮಾತನಾಡದೆ ಬಿಟ್ಟುಕೊಟ್ಟರಂತೆ. ಚಿತ್ರದಲ್ಲಿ ನಾಯಕನ ಹೆಸರು ದೇವಿಪ್ರಸಾದ್ ಅಂತ. ಅದೇ ಚುಟುಕಾಗಿ 'ದೇವಿ' ಆಗಿದೆ.
ಪ್ರಮುಖ ಆಕರ್ಷಣೆ ನಾಯಕಿ ಸ್ನೇಹಾ ಉಲ್ಲಾಳ್. ಈಕೆಯನ್ನು ಕನ್ನಡಕ್ಕೆ ಕರೆತರಬೇಕೆಂದು ಹಲವು ನಿರ್ಮಾಪಕರು ಪ್ರಯತ್ನಿಸಿದ್ದರು. ಅದು ಮಧು ಮೂಲಕ ಸ್ನೇಹಾ ಈಗ ಕನ್ನಡಕ್ಕೆ ಬರುತ್ತಿದ್ದಾರೆ. ಇವರು ಮೂಲತಃ ಮಂಗಳೂರಿನವರು.
ಚಿತ್ರದ ನಿರ್ದೇಶನ ಜವಾಬ್ದಾರಿ ಈಶ್ವರ್ ಅವರದ್ದು. ಸಂಗೀತ ವಿ. ಶ್ರೀಧರ್, ಛಾಯಾಗ್ರಹಣ ಬಿ.ಎಲ್. ಬಾಬು, ಸಂಭಾಷಣೆ ಮಳವಳ್ಳಿ ಸಾಯಿಕೃಷ್ಣ ಈ ಚಿತ್ರಕ್ಕಿದೆ. ಈಗಾಗಲೇ ಚಿತ್ರದ ಶೂಟಿಂಗ್ ಪ್ರಾರಂಭಗೊಂಡಿದ್ದು, ಮೈಸೂರು, ಹೊನ್ನಾವರ, ಜೋಗ್ ಫಾಲ್ಸ್, ಗಗನಚುಕ್ಕಿ ಮುಂತಾದ ಕಡೆಗಳಲ್ಲೂ ಚಿತ್ರೀಕರಣ ನಡೆಯಲಿದೆ.
ಚಿತ್ರಕ್ಕೆ ಗೀತೆಗಳನ್ನು ಉಪೇಂದ್ರ, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ನಾಗತಿಹಳ್ಳಿ ಚಂದ್ರಶೇಖರ್, ಕವಿರಾಜ್ ಬರೆದಿದ್ದಾರೆ.