ಉಪೇಂದ್ರ ನಿರ್ದೇಶನ-ನಟನೆಯ ಸೂಪರ್ ಚಿತ್ರಕ್ಕೆ ರಮ್ಯಾ ಕೂಡ ಸೂಪರ್ ಸರ್ಟಿಫಿಕೇಟ್ ನೀಡಿದ್ದಾರೆ. ಇತ್ತೀಚೆಗಷ್ಟೇ ಚಿತ್ರಮಂದಿರಕ್ಕೆ ಹೋಗಿ ಚಿತ್ರ ನೋಡಿದ್ದ ರಮ್ಯಾ, 'ಸೂಪರ್' ಸೂಪರ್ ಆಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
'ಜಾನಿ' ಚಿತ್ರತಂಡ ಮತ್ತು ಇತರರಿಗೆ ಸೂಪರ್ ಚಿತ್ರದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಆಯೋಜಿಸಿದ್ದ ವಿಶೇಷ ಪ್ರದರ್ಶನಕ್ಕೆ ರಮ್ಯಾ ತೆರಳಿದ್ದರು. ನಂತರ ಪ್ರತಿಕ್ರಿಯಿಸಿರುವ ಅವರು, ಸೂಪರ್ ನಿಜಕ್ಕೂ ಸೂಪರ್ ಆಗಿದೆ ಎಂದರು.
ಚಿತ್ರದಲ್ಲಿನ ರಾಜಕೀಯ ಚಿತ್ರಣ ಬೊಂಬಾಟ್. ಇದನ್ನು ಉಪ್ಪಿ ಮಾತ್ರ ಮಾಡಲು ಸಾಧ್ಯ. 2030ರ ಬೆಂಗಳೂರು ನಿಜಕ್ಕೂ ಸೂಪರ್ ಆಗಿ ಕಾಣುತ್ತದೆ ಎಂದು ತಿಳಿಸಿದ್ದಾರೆ.
ಪ್ರಸಕ್ತ ರಮ್ಯಾ ಅವರು ದುನಿಯಾ ವಿಜಯ್ ನಾಯಕನಾಗಿರುವ ಜಾನಿ ಚಿತ್ರದ ಶೂಟಿಂಗ್‌ನಲ್ಲಿ ಫುಲ್ ಬ್ಯುಸಿ. ಮೈಸೂರಿನ ಗಾಂಧಿ ಕಾಲೊನಿ ಸುತ್ತ ಮುತ್ತ ಚಿತ್ರೀಕರಣ ನಡೆಯುತ್ತಿದೆ. ರಂಗಾಯಣ ರಘು ಮತ್ತು ಶರಣ್ ಸಂಗವಂತೂ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆಯಂತೆ.
ಈ ನಡುವೆ ಮಕ್ಕಳ ಜತೆಗೆ ಕಾಲ ಕಳೆಯುವ ಅವಕಾಶವೂ ಅವರಿಗೆ ಸಿಕ್ಕಿದೆ. ಜಾನಿ ಚಿತ್ರದ ಚಿತ್ರೀಕರಣಕ್ಕಾಗಿ ಶಾಲೆಯೊಂದಕ್ಕೆ ಹೋಗಲಾಗಿತ್ತು. ಆಗ ಎರಡನೇ ತರಗತಿಯ ಮಕ್ಕಳೊಂದಿಗೆ ಬೆರೆದ ರಮ್ಯಾ, ಅವರ ಕೈ ಬರಹಗಳನ್ನು ಕೊಂಡಾಡಿದ್ದಾರೆ. ನಿಜಕ್ಕೂ ಅತ್ಯುತ್ತಮ ಹ್ಯಾಂಡ್ ರೈಟಿಂಗ್ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇವೆಲ್ಲದರ ಜತೆಗೆ ತನ್ನ ಫೇಸ್‌ಬುಕ್ ಫ್ಯಾನ್ ಪುಟಕ್ಕೆ 51,000 ಅಭಿಮಾನಿಗಳು (ramyaStar) ಸಿಕ್ಕಿರುವುದು ಕೂಡ ರಮ್ಯಾಗೆ ಸಂತಸ ತಂದಿದೆ. ಅಭಿಮಾನಿಗಳೆಲ್ಲರನ್ನೂ ಅಪಾರವಾಗಿ ಪ್ರೀತಿಸುತ್ತೇನೆ ಎಂದು ಫ್ಲೈಯಿಂಗ್ ಕಿಸ್ ರವಾನಿಸಿದ್ದಾರೆ.
10,000 ಮಂದಿಗೆ ಸೂಪರ್ ಉಚಿತ... ಇದು ರೇಡಿಯೋ ಸಿಟಿ 91.1 ಸಂಭ್ರಮಕ್ಕೆ ನೀಡಿದ ಕೊಡುಗೆ. ಇತ್ತೀಚೆಗಷ್ಟೇ ಬಂದಿದ್ದ ಸಮೀಕ್ಷೆಯಲ್ಲಿ ರೇಡಿಯೋ ಸಿಟಿ ಬೆಂಗಳೂರಿನ ಅಗ್ರ ಎಫ್ಎಂ ರೇಡಿಯೋ ಎಂಬ ಫಲಿತಾಂಶ ಬಂದಿರುವುದರಿಂದ ಈ ರೀತಿಯಾಗಿ 10,000 ಮಂದಿಗೆ 'ಸೂಪರ್' ಉಚಿತ ಪ್ರದರ್ಶನ ಏರ್ಪಡಿಸಿತ್ತು.
ಬೆಂಗಳೂರಿನ ಸಾಗರ್, ನವರಂಗ್, ನಳಂದಾ, ಈಶ್ವರಿ, ವೆಂಕಟೇಶ್ವರ, ಗೋವರ್ಧನ್, ಆದರ್ಶ, ಕೃಷ್ಣಾ, ಭಾರತಿ ಮತ್ತು ಲಕ್ಷ್ಮಿ ಚಿತ್ರಮಂದಿರಗಳಲ್ಲಿ ಕಳೆದ ಶುಕ್ರವಾರ ಈ ಪ್ರದರ್ಶನ ಏರ್ಪಡಿಸಲಾಗಿತ್ತು.