ಈಗಂತೂ ಸಿನಿಮಾ ನಿರ್ಮಾಣಕ್ಕೆ ಹೈಹಾಕಬೇಕೆಂದರೆ ಬಿಗ್ ಬಜೆಟ್ ಇರಬೇಕು ಎನ್ನುವಂತಾಗಿದೆ. ಅಂತಹುದರಲ್ಲಿ ಕಡಿಮೆ ಬಜೆಟಿನಲ್ಲಿ ಚಿತ್ರ ನಿರ್ಮಿಸೋದು ಹೇಗೆ ಎನ್ನುವುದಕ್ಕೆ ಇಲ್ಲೊಂದು 'ಸೀಕ್ರೆಟ್' ಇದೆ.
ಈ ಚಿತ್ರದ ಹೆಸರೇ 'ದಿ ಸೀಕೆಟ್'. ಕಡಿಮೆ ಬಜೆಟ್‌ನಲ್ಲಿ ಚಿತ್ರೀಕರಣ ಮುಗಿಸಿ, ಎಡಿಟಿಂಗ್ ಹಾಗೂ ಡಬ್ಬಿಂಗ್ ಕೂಡ ಪೂರ್ಣಗೊಳಿಸಲಾಗಿದೆ.
ಕೇವಲ ರೀರೆಕಾರ್ಡಿಂಗ್ ಮಾತ್ರ ಬಾಕಿ ಉಳಿದಿದೆ. ಸದ್ಯದಲ್ಲೇ ಮೂರು ಹಾಡುಗಳಿರುವ ಚಿತ್ರದ ಕ್ಯಾಸೆಟ್ ಹಾಗೂ ಸಿಡಿಗಳನ್ನು ಬಿಡುಗಡೆ ಮಾತುವ ತವಕದಲ್ಲಿದ್ದಾರೆ ನಿರ್ದೇಶಕ ಗಿರೀಶ್ ಶಿರಗನಹಳ್ಳಿ. ಅವರಿಗಿದು ಚೊಚ್ಚಲ ಚಿತ್ರವಾದರೂ, ಹಿಂದೆ ಕಿರುತೆರೆಯಲ್ಲಿ ಕೆಲಸ ಮಾಡಿದ ಅನುಭವವಿದೆ.
ಸಿ.ಜಿ. ಗ್ರೂಪ್‌ನ ಮಂಜು ನಿರ್ಮಾಪಕರು, ನವೀನ್ ಜಾಮ್ಲೆ ಸಹ ನಿರ್ಮಾಪಕರು. ಶ್ರೀಹರ್ಷ ಸಂಗೀತ, ಪ್ರಮೋದ್ ಆರ್. ಛಾಯಾಗ್ರಹಣ ಈ ಚಿತ್ರಕ್ಕಿದೆ.
ಇದೊಂದು ಸಸ್ಪೆನ್ಸ್ ಕಥೆ. ಶಿರಸಿ ಸಮೀಪದ ಕಾಡಿಗೆ ಕಾಲೇಜು ಯುವಕ-ಯುವತಿಯರ ತಂಡವೊಂದು ಟ್ರಿಪ್ ಹೋಗುತ್ತದೆ. ಆರೇಳು ಯುವಕರ ಪೈಕಿ ಒಬ್ಬೊಬ್ಬರೇ ನಾಪತ್ತೆಯಗುತ್ತಾ ಹೋಗುತ್ತಾರೆ. ಯಾಕೆ? ಏನು? ಹೇಗೆ? ಎಂಬುದೇ ಚಿತ್ರದ ಸಸ್ಪೆನ್.
ಪ್ರಮುಖ ಪಾತ್ರದಲ್ಲಿ ದೀಪಕ್ ಇದ್ದಾರೆ. ಇವರೊಂದಿಗೆ ಚೇತನ್, ಅಮಿತ್, ಹರಿ, ರೂಪಿಕಾ, ಪವಿತ್ರಾ, ಶೋಭಾ ಇತರರು ಇದ್ದಾರೆ.
ಶಿರಸಿ ಸಮೀಪದ ಬಕ್ಕಳಕಾಡಿನಲ್ಲಿ ಕೇವಲ ಎಂಟು ದಿನಗಳ ಕಾಲ ಶೂಟಿಂಗ್ ನಡೆದಿದ್ದು, ದಿನದ 23 ತಾಸುಗಳು ನಿರಂತರ ಹಗಲು-ರಾತ್ರಿ ಶೂಟಿಂಗ್ ನಡೆದು ಚಿತ್ರವನ್ನು ಪೂರ್ತಿಗೊಳಿಸಲಾಗಿದೆ.
ಇದುವರೆಗೆ ಕೇವಲ ಮೂರು ಲಕ್ಷ ರೂಪಾಯಿ ಮಾತ್ರ ಖರ್ಚಾಗಿದೆ ಎನ್ನುತ್ತಾರೆ ನಿರ್ಮಾಣದ ಜವಾಬ್ದಾರಿ ವಹಿಸಿರುವ ಮಂಜು. ಈ ಚಿತ್ರ ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗುವುದಿಲ್ಲ. ಬದಲಿಗೆ ಸಿಡಿ ಮತ್ತು ಡಿವಿಡಿ ರೂಪದಲ್ಲಿ ಜನರಿಗೆ ಸಿಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.