ಕನ್ನಡ ಚಿತ್ರರಂಗದ ಖಳನಟ ದಿವಂಗತ ಸುಧೀರ್ ಅವರ ಪುತ್ರ ತರುಣ್ ಸುಧೀರ್ ಗಾಂಧಿನಗರದಲ್ಲಿ ವಿವಿಧ ರೀತಿಯಲ್ಲಿ ಗುರುತಿಸಿಕೊಂಡಿರುವುದು ತಿಳಿದ ಸಂಗತಿ. ಈಗ ಅವರ ಎರಡನೇ ಮಗ ನಂದ ಕಿಶೋರ್ ಕೂಡ ಸೇರ್ಪಡೆಯಾಗುತ್ತಿದ್ದಾರೆ. ಆದರೆ ಅಣ್ಣನಂತೆ ಬಣ್ಣ ಹಚ್ಚುವ ಬದಲು ಕ್ಲಾಪ್ ಮಾಡುವುದು ಅವರ ಮುಂದಿರುವ ಸದ್ಯದ ಆಯ್ಕೆ.
ಹಾಗೆ ನೋಡಿದರೆ ನಂದ ಕಿಶೋರ್‌ಗೆ ಸಿನಿಮಾ ಹೊಸತಲ್ಲ. ಈಗಾಗಲೇ ಹಲವು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡವರು. ನಿರ್ದೇಶನ ಮಾತ್ರ ಹೊಸತು. ತನ್ನ ನಿರ್ದೇಶನದ ಚಿತ್ರಕ್ಕೆ ನಿರ್ಮಾಪಕರು ಎಂದು ಶಂಕರೇಗೌಡರನ್ನು ಕಿಶೋರ್ ಆರಿಸಿದ್ದಾರೆ.
ಮೂಲತಃ ರಂಗಭೂಮಿ ಹಿನ್ನೆಲೆಯಿಂದ ಬಂದ ನಂದ ಕಿಶೋರ್ 45ಕ್ಕೂ ಹೆಚ್ಚು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದವರು. ಅದಕ್ಕೂ ಹೆಚ್ಚಿನದೆಂದರೆ 'ತಾಕತ್' ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದು. ಸುದೀಪ್ ನಟಿಸುತ್ತಿರುವ 'ಕೆಂಪೇಗೌಡ' ಚಿತ್ರಕ್ಕೂ ಸಾಥ್ ನೀಡಿದ್ದಾರೆ.
ಹಾಗಾಗಿ ನಿರ್ದೇಶನ ಕಷ್ಟವಾಗದು ಅಂದುಕೊಂಡಿರುವ ಕಿಶೋರ್, ರಂಗಭೂಮಿ ಹಾಗೂ ಸಿನಿಮಾರಂಗದ ಅನುಭವವನ್ನು ಧಾರೆ ಎರೆಯುವುದಾಗಿ ಹೇಳಿಕೊಂಡಿದ್ದಾರೆ.
ಮೊದಲ ನಿರ್ದೇಶನಕ್ಕೆ ಅವರು ಆರಿಸಿಕೊಂಡದ್ದು ಅದೇ ಭೂಗತ ಲೋಕದ ಕಥೆ. ಓದಿದ್ದು, ಕೇಳಿದ್ದು ಮತ್ತು ನೋಡಿದ್ದನ್ನೇ ಚಿತ್ರ ಮಾಡುತ್ತಿದ್ದೇನೆ. ಇದು ಲವ್ ಮತ್ತು ಆಕ್ಷನ್ ಸ್ಟೋರಿ. ನವಿರು ಪ್ರೇಮಕಥೆ ಹೆಣೆದಿದ್ದೇನೆ ಎಂದು ಹೇಳಿದ್ದಾರೆ.
ಚಿತ್ರದ ನಾಯಕ ರಘು. ಇವರು ಈಗಾಗಲೇ 'ದೇವನಹಳ್ಳಿ', 'ಜಾಲಿಡೇಸ್' ಹಾಗೂ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ಚಿತ್ರಕ್ಕಿದ್ದು, ನಾಯಕಿ ಹಾಗೂ ಉಳಿದ ತಾರಾ ಬಳಗದ ಹುಡುಕಾಟದಲ್ಲಿ ತೊಡಗಿದ್ದಾರಂತೆ. ಬಹುಶಃ ಫೆಬ್ರವರಿಯಲ್ಲಿ ಚಿತ್ರ ಸೆಟೇರಬಹುದು.