ದಕ್ಷಿಣ ಭಾರತ ಖ್ಯಾತ ನಟಿ ಮೀನಾ ತಾಯಿಯಾಗಿದ್ದಾರೆ. ಇದು ರೀಲ್ ಲೈಫ್ ಅಲ್ಲ. ರಿಯಲ್ ಲೈಫಿನಲ್ಲಿ. ಕಳೆದ ವರ್ಷವಷ್ಟೇ ಮದುವೆಯಾಗಿದ್ದ ಅವರು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
ಬೆಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ವಿದ್ಯಾಸಾಗರ್ ಎಂಬುವರನ್ನು 2009ರ ಜುಲೈನಲ್ಲಿ ಮೀನಾ ವರಿಸಿದ್ದರು. ಇನ್ನೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಲಿರುವ ನಟಿಯೇ ಈ ಸುದ್ದಿಯನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಹೊಸ ವರ್ಷದ ಮರುದಿನ ಅಂದರೆ ಜನವರಿ 2ರಂದು ಬೆಳಿಗ್ಗೆ 11.30ಕ್ಕೆ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ತಾಯಿಯಾಗಿದ್ದಾರೆ.
ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಿಗೆ ಮಗುವಿಗೆ ನಾಮಕರಣ ಮಾಡಲಾಗುತ್ತದೆ ಎಂದು ಮೀನಾ ತಾಯಿ ಹೇಳಿದ್ದಾರೆ. ಜನ್ಮ ನಕ್ಷತ್ರದ ಪ್ರಕಾರ ಮಗುವಿಗೆ ಹೆಸರಿಡಲಾಗುತ್ತದೆ ಎಂದರಾದರೂ, ಹೆಸರು ಯಾವುದೆಂದು ಇದುವರೆಗೆ ಬಹಿರಂಗಪಡಿಸಿಲ್ಲ.
ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ಮೀನಾ ತಮಿಳು, ತೆಲುಗು, ಮಲಯಾಳಂ, ಕನ್ನಡ ಹಾಗೂ ಹಿಂದಿ ಚಿತ್ರಗಳಲ್ಲಿ ನಟಿಸಿ ಭಾರೀ ಹೆಸರು ಮಾಡಿದವರು.
ಕನ್ನಡದಲ್ಲಿ ಪುಟ್ನಂಜ, ಸ್ವಾತಿಮುತ್ತು, ಮೈ ಆಟೋಗ್ರಾಫ್, ಚೆಲುವೆ, ಮಲ್ಲಮ್ಮ, ಹೆಂಡ್ತೀರ ದರ್ಬಾರ್ ಮುಂತಾದ ಚಿತ್ರಗಳಲ್ಲಿ ಮೀನಾ ನಟಿಸಿದ್ದರು.